ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಹಿಜಾಬ್ ವಿವಾದ ಮುಗಿಯೋ ಲಕ್ಷಣಗಳೇ ಕಾಣುತ್ತಿಲ್ಲ. ವಿವಾದದ ನಡುವೆ ಎಲ್ಲ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಮಾಡಿದರೆ ಒಳ್ಳೆಯದು, ವಿವಾದವೂ ಇರಲ್ಲ. ವಿದ್ಯಾರ್ಥಿಗಳ ನಡುವೆ ಭೇದ-ಭಾವವೂ ಇರೋದಿಲ್ಲ ಅನ್ನೋ ಅನಿಸಿಕೆ ಹಲವರದ್ದು. ಆದರೆ ಇಂತಹ ಸಮಯದಲ್ಲೇ ಅದೊಂದು ಪದವಿ ಕಾಲೇಜಿನಲ್ಲಿ ಸಮವಸ್ತ್ರ ಕೊಡ್ತೀವಿ ಅಂತ ವಿದ್ಯಾರ್ಥಿಗಳ ಬಳಿ ಹಣ ಪಡೆದ ಪ್ರಾಂಶುಪಾಲರೇ ಲಕ್ಷಾಂತರ ರೂಪಾಯಿ ನುಂಗಿ ನೀರು ಕುಡಿದಿದ್ದಾರೆ. ನಿರ್ಗಮಿತ ಪ್ರಾಂಶುಪಾಲರ ವಿರುದ್ದ ವಿದ್ಯಾರ್ಥಿಗಳು ಸಿಡಿದೆದ್ದಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯ ಪ್ರಥಮ ದರ್ಜೆ ಪದವಿ ಕಾಲೇಜಿನ ನಿರ್ಗಮಿತ ಪ್ರಾಂಶುಪಾಲ ನಾರಾಯಣಸ್ವಾಮಿ 2018-19 ನೇ ಸಾಲಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಬ್ಲೇಜರ್ ಕೊಡೋದಾಗಿ ಹೇಳಿ ತಲಾ ವಿದ್ಯಾರ್ಥಿಯಿಂದ ಸಮವಸ್ತ್ರಕ್ಕೆ 1500 ರೂಪಾಯಿ ಹಾಗೂ ವಿತ್ ಬ್ಲೇಜರ್ ಬೇಕಾದವರಿಗೆ 2,500 ರೂಪಾಯಿ ಹಣ ವಸೂಲಿ ಮಾಡಿದ್ದಾರೆ.
ಪ್ರಾಂಶುಪಾಲರ ವಿರುದ್ದ ಹಿಗ್ಗಾಮುಗ್ಗಾ ಆಕ್ರೋಶ:500 ಕ್ಕೂ ಹೆಚ್ಚು ಮಂದಿಯಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿ ಕೇವಲ ಕೆಲವೇ ಕೆಲವರಿಗೆ ಮಾತ್ರ ಆರಂಭದಲ್ಲಿ ಸಮವಸ್ತ್ರ ನೀಡಿದ್ದಾರಂತೆ. ಇನ್ನುಳಿದವರಿಗೆ ಇನ್ನೇನು ಮೂರು ವರ್ಷದ ಪದವಿ ಕೋರ್ಸ್ ಮುಗಿದು ಹೋಗುತ್ತಿದ್ದರೂ ಸಮವಸ್ತ್ರವನ್ನೂ ಕೊಟ್ಟಿಲ್ಲ. ಕೊಟ್ಟ ಹಣ ಸಹ ವಾಪಸ್ ಕೊಟ್ಟಿಲ್ಲ.ಇದರಿಂದ ನೊಂದ ವಿದ್ಯಾರ್ಥಿಗಳು ನಿರ್ಗಮಿತ ಪ್ರಾಂಶುಪಾಲ ನಾರಾಯಣಸ್ವಾಮಿ ವಿರುದ್ದ ಹಿಗ್ಗಾಮುಗ್ಗಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.