ಚಿಕ್ಕಬಳ್ಳಾಪುರ : ಬರದ ನಾಡಲ್ಲಿ ಮಳೆ ನೋಡುವುದೇ ಅಪರೂಪ. ಇದೊಂದು ರೀತಿ ಕಣ್ಣಿಗೆ ಹಬ್ಬವೂ ಹೌದು. ಒಂದೆಡೆ ಮಳೆಯಿಂದ ಕೆರೆ ಕಟ್ಟೆಗಳು ಭರ್ತಿಯಾಗಿದ್ದು ರೈತರಲ್ಲಿ ಹರುಷ ಮೂಡಿಸಿದೆ. ಮತ್ತೊಂದೆಡೆ ಮಳೆಯಿಂದಾಗಿ ಕೆಲವೆಡೆ ಸಣ್ಣ ಸಣ್ಣ ಜಲಪಾತಗಳು ಸೃಷ್ಟಿಯಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಬರದ ನಾಡಲ್ಲಿ ಮಳೆಯೇ ಅಪರೂಪ, ಅಂಥದ್ರಲ್ಲಿ ಜಲಪಾತಗಳು ಸೃಷ್ಟಿಯಾದ್ರೆ.. - ಮಳೆಗೆ ಕೆರೆ ಕಟ್ಟೆಗಳು ಭರ್ತಿ
ನಿರಂತರ ಬರದಿಂದ ಬೇಸತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಸಣ್ಣಪುಟ್ಟ ಜಲಪಾತಗಳು ಸೃಷ್ಟಿಯಾಗಿವೆ.
ಸತತ ಬರದಿಂದ ಕಂಗೆಟ್ಟ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ವರುಣದೇವ ಕೃಪೆ ತೋರಿಸುತ್ತಿದ್ದಾನೆ. ಭಾರೀ ಮಳೆಗೆ ಹಲವೆಡೆ ಕೆರೆ ಕಟ್ಟೆಗಳು ತುಂಬಿವೆ. ಹಾಗಾಗಿ ಸಹಜವಾಗಿಯೇ ಜಿಲ್ಲೆಯ ರೈತರು ಖುಷಿಯಾಗಿದ್ದಾರೆ. ಮಳೆಯಿಂದ ಚಿಕ್ಕಬಳ್ಳಾಪುರದಿಂದ 7 ಕಿಲೋ ಮೀಟರ್ ದೂರದಲ್ಲಿರುವ ತಾಲೂಕಿನ ಕೇತನಹಳ್ಳಿ ಸಮೀಪ ಮಿನಿ ಫಾಲ್ಸ್ ಸೃಷ್ಟಿಯಾಗಿದ್ದು, ನೋಡಲು ನಯನ ಮನೋಹರವಾಗಿದೆ. ಸುತ್ತಮತ್ತಲಿನ ಗ್ರಾಮಸ್ಥರು, ಪ್ರವಾಸಿಗರೆಲ್ಲಾ ಈ ಜಲಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ನೀರು ಹರಿಯುತ್ತಿರುವ ದೃಶ್ಯಗಳನ್ನು ಜನರು ಮೊಬೈಲ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಮಳೆಯಿಂದಾಗಿ ಬಾಗೇಪಲ್ಲಿ ತಾಲೂಕಿನಲ್ಲಿಯೂ ಚೆಕ್ ಡ್ಯಾಂಗಳು ಸೇರಿದಂತೆ ಕೆರೆ, ಕಟ್ಟೆಗಳು ತುಂಬಿದ್ದು ಗಡಿಭಾಗದ ಬಯಲುಸೀಮೆ ಜನತೆಗೆ ಜೀವಬಂದಂತಾಗಿದೆ. ತಾಲೂಕಿನ ಗುಡಿಪಲ್ಲಿ ಗ್ರಾಮದ ಬಳಿ ಇರುವ ಜಲಮಡಗು ಜಲಪಾತ ತುಂಬಿ ಹರಿಯುತ್ತಿದೆ. ಅದೇ ರೀತಿ, ಬಾಗೇಪಲ್ಲಿಗೆ ನೀರು ಸರಬರಾಜು ಮಾಡುವ ಚಿತ್ರಾವತಿ ಅಣೆಕಟ್ಟೆಗೆ ನೀರು ಹೆಚ್ಚಾಗಿ ಹರಿಯುತ್ತಿದ್ದು, ಪ್ರಕೃತಿ ಪ್ರಿಯರನ್ನು ಸೆಳೆಯುತ್ತಿದೆ.