ಚಿಕ್ಕಬಳ್ಳಾಪುರ :ಆ ಜಿಲ್ಲೆಯ ಜನರ ಮುಖ್ಯ ಕಸುಬು ರೇಷ್ಮೆ ಸಾಕಾಣಿಕೆ. ಆ ಜಿಲ್ಲೆಯಿಂದ ಇಡೀ ರಾಜ್ಯಕ್ಕೆ ರೇಷ್ಮೆ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ರೇಷ್ಮೆ ಸೊಪ್ಪಿಗೆ ವಕ್ಕರಿಸಿದ ಅದೊಂದು ರೋಗ, ಜಿಲ್ಲೆಯ ರೇಷ್ಮೆ ಸಾಕಾಣಿಕೆದಾರರನ್ನು ಸಂಕಷ್ಟಕ್ಕೆ ನೂಕಿದೆ.
ಈ ಬಾರಿ ಸುರಿದ ಭಾರಿ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅನ್ನದಾತ ತತ್ತರಿಸಿದ್ದ. ಆದರೆ, ರೇಷ್ಮೆ ಸಾಕಾಣಿಕೆಯಿಂದ ಬರುತಿದ್ದ ಅಲ್ಪಸ್ವಲ್ಪ ಆದಾಯದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದ. ಆದರೆ, ವಿಧಿ ರೈತರ ಬದುಕಲ್ಲಿ ಚೆಲ್ಲಾಟ ಆಡಿದ್ದಾನೆ.
ತಾನು ಸಾಕಿ ಬೆಳೆಸಿ ಆಳೆತ್ತರ ಬೆಳೆದು ಕೊಯ್ಲಿಗೆ ಬಂದಿದ್ದ ರೇಷ್ಮೆ ಸೊಪ್ಪಿಗೆ ನುಸಿರೋಗ ವಕ್ಕರಿಸಿ ನೋಡ ನೋಡುತ್ತಿದ್ದಂತೆ ಸೊರಗಿ ಕಣ್ಣು ಮಂದೆ ಉದುರಿ ಉಪ್ಪಾಗಿ ಹೋಗುತ್ತಿದೆ.
ಈ ಸೊಪ್ಪನ್ನು ತಿಂದ ರೇಷ್ಮೆ ಹುಳುಗಳು ವಾಂತಿ ಮಾಡಿಕೊಂಡು ಸಾಯುತ್ತಿವೆ. ರೇಷ್ಮೆ ಸೊಪ್ಪಿಗೆ ಬಂಗಾರದ ಬೆಲೆ ಇದ್ರೂ ರೇಷ್ಮೆ ಬೆಳೆಯಲು ಆಗದೆ ಕೈಚೆಲ್ಲಿ ಕೂತಿದ್ದಾನೆ ರೈತ.
ರೇಷ್ಮೆ ಸೊಪ್ಪಿಗೆ ವಕ್ಕರಿಸಿದ ನುಸಿರೋಗ.. ರೇಷ್ಮೆ ಸೊಪ್ಪಿಗೆ ಈ ರೀತಿಯ ರೋಗ ಹರಡಿರುವುದರಿಂದ ಜಿಲ್ಲೆಯಲ್ಲಿ ಎಲ್ಲಿಯೂ ಸೊಪ್ಪು ಸಿಗುತ್ತಿಲ್ಲ. ಅಲ್ಪ-ಸ್ವಲ್ಪ ಇರುವ ಸೊಪ್ಪನ್ನು ಕೊಂಡುಕೊಳ್ಳೋಣ ಅಂತಾ ಹೋಗಿ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ. ಇದರಿಂದ ಕಂಗೆಟ್ಟ ರೈತ ರೇಷ್ಮೆ ಇಲಾಖೆ ಅಧಿಕಾರಿಗಳ ಬಳಿ ಪರಿಹಾರ ಕೇಳಿದರೆ, ಯಾವುದೋ ಒಂದು ಟಾನಿಕ್ ಸಿಂಪಡಿಸಿ ಅಂತಾ ಹೇಳಿದ್ರು.
ಟಾನಿಕ್ ಸಿಂಪಡಿಸಿದ್ರೂ ರೋಗ ಕಂಟ್ರೋಲ್ಗೆ ಬರುತ್ತಿಲ್ಲ. ಇತ್ತ ಸೊಪ್ಪು ಸಿಗದೆ, ರೇಷ್ಮೆ ಹುಳು ಸಾಕಾಣಿಕೆ ಮಾಡಲು ಆಗದೆ ರೈತ ಇಕ್ಕಟ್ಟಿಗೆ ಸಿಲುಕಿದ್ದಾನೆ. ರೇಷ್ಮೆ ಸಾಕಾಣಿಕೆ ಮಾಡೋದೆ ಬೇಡ ಎಂಬ ತೀರ್ಮಾನಕ್ಕೆ ರೈತ ಬಂದು ನಿಂತಿದ್ದಾನೆ.
ಚಿಕ್ಕಬಳ್ಳಾಪುರ ರೈತನಿಗೆ ಒಂದರ ಮೇಲೊಂದು ತೊಂದರೆ ಆಗುತ್ತಿದೆ. ಒಂದು ಕಡೆ ಕೊರೊನಾ, ಒಂದು ಕಡೆ ಪ್ರವಾಹ. ಇದರಿಂದ ಚೇತರಿಸಿಕೊಳ್ಳುತ್ತಿದ್ದ ರೈತನಿಗೆ ಆಲ್ ಟೈಮ್ ಇನ್ಕಮ್ ತಂದು ಕೊಡುತ್ತಿದ್ದ ರೇಷ್ಮೆ ಸಾಕಾಣಿಕೆಯೂ ಕೈಕೊಟ್ಟಿರುವುದು ವಿಪರ್ಯಾಸವೇ ಸರಿ.
ಓದಿ:ಮರಳು, ಕಲ್ಲು ಹಾಗೂ ರಿಯಲ್ ಎಸ್ಟೆಟ್ ವಿಚಾರಕ್ಕೆ ಪೊಲೀಸರು ಕೈ ಜೋಡಿಸಿದರೆ ಕಠಿಣ ಕ್ರಮ : ಆರಗ ಜ್ಞಾನೇಂದ್ರ