ಕರ್ನಾಟಕ

karnataka

ETV Bharat / state

ಸಚಿವರಾಗಲು ಸಿದ್ದರಾಮಯ್ಯ ಸರ್ಟಿಫಿಕೇಟ್​ ಬೇಕಿಲ್ಲ: ಸಚಿವ ಸುಧಾಕರ್ - ಎನ್ಎಂಸಿ ಗೈಡ್ ಲೈನ್ಸ್

ಸಿದ್ದರಾಮಯ್ಯ ಹೇಳಿದ ಕಾರಣಕ್ಕೆ ತಮ್ಮನ್ನು ಸಚಿವರನ್ನಾಗಿ ಮಾಡಿಲ್ಲ - ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟಾಂಗ್​

ಆರೋಗ್ಯ ಸಚಿವ ಡಾ ಕೆ ಸುಧಾಕರ್
ಆರೋಗ್ಯ ಸಚಿವ ಡಾ ಕೆ ಸುಧಾಕರ್

By

Published : Jan 27, 2023, 6:20 PM IST

ಚಿಕ್ಕಬಳ್ಳಾಪುರ : ತಾವು ಸಚಿವರಾಗಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವುದು ರಾಜ್ಯದ ಜನತೆ ಮತ್ತು ನಮ್ಮ ಪಕ್ಷದ ಸರ್ಕಾರವೇ ಹೊರತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಲ್ಲ. ತಮ್ಮ ಅರ್ಹತೆ ಬಗ್ಗೆ ಸಿದ್ದರಾಮಯ್ಯ ಅವರ ಪ್ರಮಾಣ ಪತ್ರ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯನವರಿಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ತಿರುಗೇಟು ನೀಡಿದ್ದಾರೆ.

ಚಿತ್ರಾವತಿ ಸುಬ್ರಹ್ಮಣ್ಯೇಶ್ವರ ಜಾತ್ರೆಗೆ ಶುಕ್ರವಾರ ಬೆಳಗ್ಗೆ ಚಾಲನೆ ನೀಡಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಹೇಳಿದ ಕಾರಣಕ್ಕೆ ತಮ್ಮನ್ನು ಸಚಿವರನ್ನಾಗಿ ಮಾಡಿಲ್ಲ. ನಮ್ಮ ಪಕ್ಷದ ಸರ್ಕಾರ, ನಮ್ಮ ಮುಖ್ಯಮಂತ್ರಿ ಮತ್ತು ಈ ರಾಜ್ಯದ ಜನತೆ ತಮ್ಮನ್ನು ಸಚಿವರನ್ನಾಗಿ ಮಾಡಿದ್ದಾರೆ. ಜನತಾದಳದಲ್ಲಿದ್ದಾಗ ಯಾಕೆ ಇವರನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಬಾಯಿ ಚಪಲಕ್ಕೆ ಮಾತನಾಡುವುದು ಸರಿಯಲ್ಲ. ಬೀದರ್​ನಿಂದ ಕೆಜಿಎಫ್​ವರೆಗೂ ತಮ್ಮ ಖಾತೆ ನಿರ್ವಹಣೆ ಬಗ್ಗೆ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ತಾವು ಸಚಿವ ಸ್ಥಾನಕ್ಕೆ ಲಾಯಕ್ಕಾ? ಅಲ್ಲವಾ ಎಂಬುದನ್ನು ಜನರು ನಿರ್ಧಾರ ಮಾಡುತ್ತಾರೆ. ಅವರ ಸರ್ಟಿಫಿಕೇಟ್​ ಬೇಕಾಗಿಲ್ಲ ಎಂದು ಖಾರವಾಗಿಯೇ ಉತ್ತರಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಬಿಜೆಪಿ ಶಾಸಕರು ಹೈಕಮಾಂಡ್​ಗೆ ಪತ್ರ ಬರೆದಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕಾಂಗ್ರೆಸ್ ನವರು ಕಾಲ್ಪನಿಕ ಕನಸು ಕಂಡಿರಬೇಕು ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ನಲ್ಲಿ ಇಬ್ಬರು ನಾಯಕರಿದ್ದಾರೆ. ಕೆಲವರು ಡಿ. ಕೆ. ಶಿವಕುಮಾರ್ ಅವರನ್ನು ಬಯಸುತ್ತಿದ್ದರೆ, ಮತ್ತೆ ಕೆಲವರು ಸಿದ್ದರಾಮಯ್ಯ ಪರ ಇದ್ದಾರೆ. ಈಗ ಮೂರನೇಯವರೂ ಹುಟ್ಟಿಕೊಂಡಿದ್ದು, ಮಲ್ಲಿಕಾರ್ಜುನ ಖರ್ಗೆ ಅವರನ್ನು ಯಾಕೆ ಮುಖ್ಯಮಂತ್ರಿ ಮಾಡಬಾರದು? ಎಂದು ಮತ್ತೊಂದು ಗುಂಪು ಪ್ರಶ್ನಿಸುತ್ತಿದೆ ಎಂದರು.

ಅಲ್ಲದೇ, 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹಿರಿಯ ನಾಯಕ ಪರಮೇಶ್ವರ್ ಅವರನ್ನು ಯಾಕೆ ಮೂಲೆಗುಂಪು ಮಾಡಿದರು ಎಂಬ ಬಗ್ಗೆಯೂ ಪ್ರಶ್ನೆಗಳಿದ್ದು, ದಲಿತ ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಮೊದಲಿನಿಂದಲೂ ಇದೆ. ದಲಿತರ ಮತ ಪಡೆಯುತ್ತಾರೆ. ಅವರಿಗೆ ನ್ಯಾಯ ಒದಗಿಸಿಲ್ಲ ಎಂಬ ಆರೋಪಗಳೂ ಇವೆ ಎಂದು ಹೇಳಿದರು.

ಕಾಂಗ್ರೆಸ್ ನವರು ಸತತವಾಗಿ ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಾವು ರಾಜಕೀಯವಾಗಿ ಬೆಳೆಯುತ್ತಿರುವ ಕಾರಣ ತಮ್ಮ ಬಗ್ಗೆ ಅವರಿಗೆ ಭಯ ಇದೆ. ಈ ಭಾಗದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಅವರು ಸತತ ಸುದ್ದಿಗೋಷ್ಠಿಗಳ ಮೂಲಕ ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು: ಜಿಲ್ಲೆಯ ಜನತೆ ತಮ್ಮನ್ನು ಮುಖ್ಯಮಂತ್ರಿಯಾಗಿ ನೋಡುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿ, ನಾಡಿನ ಮುಖ್ಯಮಂತ್ರಿಗಳು ಉತ್ತಮ ಕೆಲಸ ಮಾಡುತ್ತಿದ್ದು, ಅವರ ತಂಡದಲ್ಲಿ ನಾನು ಇದ್ದೇನೆ. ಮೂರು ಬಾರಿ ಶಾಸಕನಾಗಿದ್ದು, ಮತ್ತೆ ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬ ಆಶಯ ಹೊಂದಿದ್ದೇನೆ. ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡುವ ಉದ್ದೇಶವಿದ್ದು, ಈ ಬಗ್ಗೆ ಭಗವಂತನಲ್ಲಿಯೂ ಪ್ರಾರ್ಥಿಸಿರುವುದಾಗಿ ಅವರು ಹೇಳಿದರು.

ನಮ್ಮದೇ ಸರ್ಕಾರದ ಅವಧಿಯಲ್ಲಿ ಶಂಕುಸ್ಥಾಪನೆ ಮಾಡಿದ ವೈದ್ಯಕೀಯ ಕಾಲೇಜು ಈಗ ಉದ್ಘಾಟನೆಗೆ ಸಿದ್ಧವಾಗಿದ್ದು, ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಲಿದೆ. ಪ್ರಧಾನಿಯವರನ್ನು ಕಾಣಲು ಜಿಲ್ಲೆಯ ಲಕ್ಷಾಂತರ ಜನರು ಅಂದಿನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಹಾಗಾಗಿ ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಹಿಂದುಳಿದ ವರ್ಗಗಳಲ್ಲಿ ಅವರು ಅಗ್ರಗಣ್ಯ ನಾಯಕ:ವೈದ್ಯಕೀಯ ಕಾಲೇಜು ಉದ್ಘಾಟನೆಗಾಗಿ ಗುತ್ತಿಗೆದಾರರು ಸೇರಿದಂತೆ ಸಂಬಂಧಿಸಿದ ಎಲ್ಲರೂ ಹಗಲಿರುಳು ಶ್ರಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರಾಗಿ ಬೆಳೆದಿದ್ದಾರೆ. ಹಿಂದುಳಿದ ವರ್ಗಗಳಲ್ಲಿ ಅವರು ಅಗ್ರಗಣ್ಯ ನಾಯಕರಾಗಿದ್ದಾರೆ. ಬೇರೆಯವರ ರೀತಿಯಲ್ಲಿ ಅವರು ಎಂದೂ ಅಹಿಂದ ನಾಯಕ ಎಂದು ಹೇಳಿಲ್ಲ. ಪ್ರಧಾನಿಗಳು ದೇಶಕ್ಕೇ ಅತ್ಯಂತ ದೊಡ್ಡ ಅಹಿಂದ ನಾಯಕರಾಗಿದ್ದು, ಅಂತಹ ನಾಯಕರು ಕ್ಷೇತ್ರಕ್ಕೆ ಬರುವ ಬಗ್ಗೆ ಜನರಲ್ಲಿ ಕುತೂಹಲ ಇದೆ ಎಂದು ಹೇಳಿದರು.

ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಕಾಂಗ್ರೆಸ್ ಪಕ್ಷದವರ ಷಡ್ಯಂತ್ರ ಎಂದು ಸಚಿವರು ಹೇಳಿದರು. ಇತ್ತೀಚಿಗೆ ಪ್ರಕಟವಾದ ಪದ್ಮ ಪ್ರಶಸ್ತಿಗಳಲ್ಲಿ ರಾಜ್ಯಕ್ಕೆ 8 ಪ್ರಶಸ್ತಿ ಲಭಿಸಿದ್ದು, ಇದರಲ್ಲಿ ಇಬ್ಬರು ಅಲ್ಪಸಂಖ್ಯಾತರಾಗಿದ್ದಾರೆ. ಪ್ರಧಾನಿಯವರಾಗಲೀ, ಬಿಜೆಪಿಯಾಗಲೀ ಅಲ್ಪಸಂಖ್ಯಾತರ ಬಗ್ಗೆ ನಿರ್ಲಕ್ಷ್ಯ ಹೊಂದಿಲ್ಲ. ಅಲ್ಪಸಂಖ್ಯಾತರ ಮತ ಪಡೆಯುವ ಹುನ್ನಾರದಿಂದ ಕಾಂಗ್ರೆಸ್ ಮಾಡಿರುವ ಷಡ್ಯಂತ್ರವಾಗಿದೆ ಎಂದರು. ವಿದೇಶದಲ್ಲಿ ಎಂಬಿಬಿಎಸ್ ಮಾಡಿದವರು ರಾಜ್ಯದಲ್ಲಿ ಸೇವೆ ಒದಗಿಸಲು ನೆಕ್ಸ್ಟ್ ಪರೀಕ್ಷೆ ತೇರ್ಗಡೆಯಾದರೆ ಮಾತ್ರ ಅವಕಾಶ ಎಂದು ಸಚಿವರು ಹೇಳಿದರು.

ಎನ್ಎಂಸಿ ಗೈಡ್ ಲೈನ್ಸ್​ನಂತೆ ಪರೀಕ್ಷೆ ತೇರ್ಗಡೆಯಾದರೆ ಮಾತ್ರ ಭಾರತದಲ್ಲಿ ಸೇವೆ ಒದಗಿಸುವ ಜೊತೆಗೆ ಸರ್ಕಾರಿ ವೈದ್ಯರಾಗಲು ಅರ್ಹರಿರುತ್ತಾರೆ. ಇದು ರಾಜ್ಯಕ್ಕೆ ಸಂಬಂಧಿಸಿದ ವಿಷಯವಲ್ಲ, ಬದಲಿಗೆ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಚಾರವಾಗಿದೆ ಎಂದು ಸ್ಪಷ್ಟಪಡಿಸಿದರು.

ದೇಶದ ಸತ್ವವೇ ದೇವರು ಮತ್ತು ಧರ್ಮ: ಪ್ರಸ್ತುತ ಕೋವಿಡ್​ನಿಂದ ದೇಶ ದೂರ ಆಗಿರುವ ಸೂಚನೆಗಳಿವೆ. ಹಾಗಾಗಿ ಎಲ್ಲ ಚಟುವಟಿಕೆ ಪುನರಾರಂಭವಾಗಿದೆ. ದೇಶದ ಸತ್ವವೇ ದೇವರು ಮತ್ತು ಧರ್ಮ. ಈಗ ಎಲ್ಲ ಧಾರ್ಮಿಕ ಚಟುವಟಿಕೆ ನಡೆಯುತ್ತಿದ್ದು, ಉತ್ತಮ ಮಳೆ ಬೆಳೆಯಾಗಿ, ಸಮಾಜದಲ್ಲಿ ಸುಖ ಶಾಂತಿ ನೆಲಸಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಸಚಿವರು ಹೇಳಿದರು.

ಕಳೆದ 10 ವರ್ಷದಿಂದ ಚಿತ್ರಾವತಿ ಸುಬ್ರಹ್ಮಣ್ಯ ಜಾತ್ರೆಗೆ ತಾವೇ ಚಾಲನೆ ನೀಡುತ್ತಿದ್ದು, ಪ್ರತಿ ವರ್ಷ ರಥೋತ್ಸವದಲ್ಲಿ ಭಾಗಿಯಾಗುತ್ತಿರುವುದಾಗಿ ಅವರು ಹೇಳಿದರು. ಈ ದೇವರಿಗೆ ಸಾವಿರಾರು ಭಕ್ತಾಧಿಗಳಿದ್ದಾರೆ. ನಂಬಿಕೆ ಇಟ್ಟಿಕೊಂಡಿರುವ ಕ್ಷೇತ್ರ ಇದಾಗಿದ್ದು, ಇಷ್ಟಾರ್ಥ ಈಡೇರಿಸುವ ದೇವರೆಂಬ ಖ್ಯಾತಿ ಇದೆ ಎಂದು ತಿಳಿಸಿದರು.

ಓದಿ :ಯಾರೋ ಬಾರ್​ನಲ್ಲಿ ಹೊಡೆದಾಟ ಮಾಡಿಕೊಂಡಿದ್ದಕ್ಕೆ ರಾಜಕೀಯ ಬಣ್ಣ ಕೊಟ್ಟರೆ ಹೇಗೆ?: ಗೃಹ ಸಚಿವ ಆರಗ ಜ್ಞಾನೇಂದ್ರ

ABOUT THE AUTHOR

...view details