ಚಿಕ್ಕಬಳ್ಳಾಪುರ: 2023ರ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಬಿರುಸಿನ ತಯಾರಿ ನಡೆಸಿವೆ. ಮತದಾರರನ್ನು ಸೆಳೆಯಲು ಈಗಿನಿಂದಲೇ ಇನ್ನಿಲ್ಲದ ಕಸರತ್ತು ನಡೆಸಿವೆ. ರಾಜ್ಯದ 224 ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳು ಯಾರು ಎಂಬುದರ ಕುತೂಹಲ ಸಹ ಮೂಡಿವೆ. ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ಎಂಬಂತೆ ಈಗಾಗಲೇ ಜೆಡಿಎಸ್ 93 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಯಾಗಿದೆ. ಅಲ್ಲದೆ, ರಾಜ್ಯಾದ್ಯಂತ ಪಂರತ್ನ ರಥಯಾತ್ರೆಯನ್ನು ಸಹ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ಜನವರಿ ಮೊದಲ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸುವ ಸಾಧ್ಯತೆಯಿದೆ.
ಈ ಮಧ್ಯೆ ಶಿಡ್ಲಘಟ್ಟದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿಯೇ ಇದೆ. ಒಂದು ಕಡೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಂತಿಮ ಆಗಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಅಂತಿಮ ಎನ್ನಲಾಗ್ತಿದ್ದರೂ ಸಹ ಹೆಸರನ್ನು ಮಾತ್ರ ಬಹಿರಂಗ ಪಡಿಸದ ಹೈಕಮಾಂಡ್ ಕ್ಷೇತ್ರದಲ್ಲಿ ಶಾಸಕ ಸ್ಥಾನ ಭದ್ರಪಡಿಸಿಕೊಳ್ಳಲು ತಮ್ಮದೇ ಆದ ಶೈಲಿಯಲ್ಲಿ ಸರ್ಕಾರದ ಸಹಕಾರದಿಂದಲೇ ಸಾಕಷ್ಟು ಪ್ರಚಾರ ನಡೆಸುತ್ತಿದೆ.
ಮಗನನ್ನು ಅಖಾಡಕ್ಕಿಳಿಸಲು ಸಿದ್ಧತೆ.. ಆದರೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದಂತಾಗಿದೆ. ಆದ್ರೆ ಸ್ಥಳೀಯ ಶಾಸಕ ಕಾಂಗ್ರೆಸ್ ಅಭ್ಯರ್ಥಿ ಯಾರು ಅನ್ನೋದನ್ನು ಅಂತಿಮ ಮಾಡಿದಂತಿದೆ. ಹೌದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕನಾಗಿ ಆರು ಬಾರಿ ಚುನಾವಣೆಯಲ್ಲಿ ಗೆದ್ದಂತಹ ಶಾಸಕ ವಿ ಮುನಿಯಪ್ಪ ಮುಂದಿನ ಚುನಾವಣೆಯಲ್ಲಿ ಮಗ ಶಶಿಧರ್ ಅವರನ್ನು ಕಣಕ್ಕೆ ಇಳಿಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.