ಚಿಂತಾಮಣಿ: ನಗರಸಭೆ ಅಧ್ಯಕ್ಷರ ವಾರ್ಡ್ ನಂ.05ರ ಟ್ಯಾಂಕ್ ಬಾಂಡ್ ಮುಖ್ಯ ರಸ್ತೆಯಲ್ಲಿ ಕಳೆದ ಕೆಲ ದಿನಗಳಿಂದ ಯುಜಿಡಿ ಬ್ಲಾಕ್ ಆಗಿ ರಸ್ತೆಗೆ ಗಲೀಜು ನೀರು ಹರಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆಯಲ್ಲಿ ಚರಂಡಿ ನೀರು: ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ - ಚಿಂತಾಮಣಿ
ನಗರಸಭೆ ಅಧ್ಯಕ್ಷರ ವಾರ್ಡ್‌ನ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿರುವ ಚರಂಡಿಗಳಲ್ಲಿ ತ್ಯಾಜ್ಯ ನೀರು ಹರಿದು ಹೋಗದೆ ಮಡುಗಟ್ಟಿ ನಿಂತಿದೆ. ಆದರೂ ಯಾವೊಬ್ಬ ಅಧಿಕಾರಿ ಇತ್ತ ಗಮನ ಹರಿಸದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿರುವ ಚರಂಡಿಗಳಲ್ಲಿಯೂ ತ್ಯಾಜ್ಯ ನೀರು ಹರಿದು ಹೋಗದೆ ಮಡುಗಟ್ಟಿ ನಿಂತಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ತಲೆದೋರಿದೆ. ವಾರ್ಡ್‌ನ ಜನತೆ ಈ ಗಲೀಜು ನೀರಿನಲ್ಲಿಯೇ ನಡೆದಾಡಬೇಕಾಗಿದೆ. ಈ ಮುಖ್ಯ ರಸ್ತೆಯ ಜನರಿಗೆ ಸಂಜೆಯಾದರೆ ಸೊಳ್ಳೆ ಕಾಟ, ಮೂಗು ಮುಚ್ಚಿಕೊಂಡು ವ್ಯವಹರಿಸಬೇಕಾದ ಪರಿಸ್ಥಿತಿಯಿದೆ.
ಒಂದೆಡೆ ಜನರು ಕೊರೊನಾದಿಂದ ಭಯಭೀತರಾಗಿದ್ದಾರೆ. ಇತ್ತ ದುರ್ನಾತ ಬೀರುವ ನೀರಿನ ವಾಸನೆಯಿಂದ ಮನೆಗಳಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ನಾವು ಹೋರಾಟದ ಹಾದಿ ತುಳಿಯುವುದು ಅನಿವಾರ್ಯ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.