ಚಿಕ್ಕಬಳ್ಳಾಪುರ:ತಾಲೂಕು ಕಚೇರಿಯಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಸಾರ್ವಜನಿಕರು ಕಚೇರಿಯ ಬಳಿಯೇ ಮಲಗಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ವಾಪಸ್ ತೆರಳುತ್ತಿರುವ ದೃಶ್ಯ ಜಿಲ್ಲೆಯ ಚಿಂತಾಮಣಿ ತಾಲೂಕು ಕಚೇರಿಯಲ್ಲಿ ಕಂಡುಬರುತ್ತಿದೆ.
ಕಳೆದ 2 ದಿನಗಳಿಂದ ತಾಲೂಕು ಕಚೇರಿಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು ಬೆಳಗ್ಗೆಯಿಂದಲೇ ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡುವವರು ಕುಟುಂಬ ಸಮೇತ ಬಂದು ಕುಳಿತಿದ್ದರೂ ನೋಂದಣಿ ಕೆಲಸ ಮುಗಿಯಲಿಲ್ಲ ಎಂದು ಅಧಿಕಾರಿಗಳಿಗೆ ಬೈಯುತ್ತಲೇ ತೆರಳಿದರು. ಸರ್ಕಾರಕ್ಕೆ ರಾಜಸ್ವ ತಂದುಕೊಡುವ ಇಲಾಖೆಯನ್ನು ತಾಂತ್ರಿಕವಾಗಿಯೂ ಸಬಲಗೊಳಿಸಲು ಸರ್ಕಾರಕ್ಕೆ ಬೇಜವಾಬ್ದಾರಿ ಏಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೇರೆಲ್ಲಾ ಕೆಲಸ ಬಿಟ್ಟು ಕುಟುಂಬ ಸಮೇತ ಬಂದು ಕುಳಿತಿದ್ದೇವೆ. ಸರ್ವರ್ ಸಮಸ್ಯೆ ಎಂದು ಕಾರಣ ತಿಳಿಸಿ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ಇದೇ ಕೆಲಸಕ್ಕೆ ಮತ್ತೊಂದು ದಿನ ಕಚೇರಿಗೆ ಬರಬೇಕಾಗಿದೆ. ನಮ್ಮ ಸಮಯ ವ್ಯರ್ಥ ಆಗಿರುವುದಕ್ಕೆ ಪರಿಹಾರ ಕೊಡುವವರು ಯಾರು ಎಂದು ಪ್ರಶ್ನಿಸಿದರು.