ಚಿಕ್ಕಬಳ್ಳಾಪುರ:ಕೇಂದ್ರದ ಮಾಜಿ ಸಚಿವ, ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‍ನ ಪ್ರಭಾವಿ ನಾಯಕರೂ ಆಗಿರುವ ಕೆ.ಎಚ್.ಮುನಿಯಪ್ಪ ಅವರು ತಮ್ಮ ಹುಟ್ಟೂರು ಶಿಡ್ಲಘಟ್ಟ ತಾಲೂಕಿನ ಕಂಬದಹಳ್ಳಿ ನಡೆದ ಊರ ಜಾತ್ರೆಗೆ ಬಿಜೆಪಿಯ ಪ್ರಭಾವಿ ಮುಖಂಡರನ್ನು ಊಟಕ್ಕೆ ಆಹ್ವಾನಿಸಿದ್ದು, ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿ ನಾಯಕರನ್ನು ಊಟಕ್ಕೆ ಆಹ್ವಾನಿಸಿದ ಕಾಂಗ್ರೆಸ್ ಪ್ರಭಾವಿ ನಾಯಕ ಕಾಂಗ್ರೆಸ್ ನಾಯಕರಿಗೆ ಟಕ್ಕರ್ ಕೊಡಲೆಂದೇ ಮುನಿಯಪ್ಪ ಅವರು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ತಮ್ಮ ಮನೆಗೆ ಊರ ಜಾತ್ರೆಯ ಊಟದ ನೆಪದಲ್ಲಿ ತಮ್ಮ ಮನೆಗೆ ಆಹ್ವಾನಿಸಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.
ರಾಜ್ಯ ಹಾಗೂ ಕೇಂದ್ರದ ಕಾಂಗ್ರೆಸ್‍ನಲ್ಲಿ ತಮ್ಮದೇ ಆದ ವರ್ಚಸ್ಸು ಶಕ್ತಿ ಹೊಂದಿರುವ ಅವರನ್ನು ಕಳೆದ ಲೋಕಸಭೆ ಚುನಾವಣೆ ನಂತರ ಪಕ್ಷದಲ್ಲಿ ಮೂಲೆ ಗುಂಪು ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದೇ ಸಮಯದಲ್ಲೇ ಊರ ಜಾತ್ರೆಯ ನೆಪದಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್, ಮುನಿರತ್ನಂ, ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರನ್ನು ತಮ್ಮ ಮನೆಗೆ ಊಟಕ್ಕಾಗಿ ಆಹ್ವಾನಿಸಿರುವುದು ಹೊಸ ಚರ್ಚೆ ಹುಟ್ಟು ಹಾಕಿದೆ.
ಇದು ಊರ ಜಾತ್ರೆ, ನಮ್ಮ ಮನೆಗೆ ಊಟಕ್ಕಾಗಿ ಆತ್ಮೀಯವಾಗಿ ಪಕ್ಷಾತೀತವಾಗಿ ಎಲ್ಲರನ್ನೂ ಆಹ್ವಾನಿಸಿದ್ದೇನೆ ಎಂದು ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಆದರೆ, ಸ್ಥಳೀಯ ಶಾಸಕ ವಿ.ಮುನಿಯಪ್ಪ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಯಾರೂ ಕಾಣಿಸದೇ ಇರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಗಾಂಧಿ ಕುಟುಂಬದ ಹೆಸರಲ್ಲಿ ಮೂರ್ನಾಲ್ಕು ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ - ಈಗ ಋಣ ತೀರಿಸುವ ಸಮಯ ಬಂದಿದೆ: ರಮೇಶ್ ಕುಮಾರ್