ಚಿಕ್ಕಬಳ್ಳಾಪುರ: ಬಾಕಿ ಉಳಿಸಿಕೊಂಡ ವೇತನ ನೀಡುವಂತೆ ಕೋರಿದಾಗ ಆರೋಗ್ಯ ಅಧಿಕಾರಿ ಹಲ್ಲೆ ನಡೆಸಿದ್ದಾರೆ ಎಂದು ಶಿಡ್ಲಘಟ್ಟ ನಗರಸಭೆಯ ಪೌರ ಕಾರ್ಮಿಕರೊಬ್ಬರು ಆರೋಪಿಸಿದ್ದಾರೆ.
ಕಳೆದ 13 ತಿಂಗಳಿಂದ ವೇತನ ಪಾವತಿಸಿಲ್ಲ. ಈ ಬಗ್ಗೆ ವಿಚಾರಿಸಲು ಹೋದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ತೀವ್ರ ಮನನೊಂದು ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಸಂದೀಪ್ ಹೇಳಿದ್ದಾರೆ.
ನಗರಸಭೆಯಲ್ಲಿ ಹೊರಗುತ್ತಿಗೆ ಒಪ್ಪಂದದ ಮೇಲೆ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ದೊಗರನಾಯಕನಹಳ್ಳಿ ನಿವಾಸಿ ಸಂದೀಪ್ (28) ಅವರು ಜಿರಳೆ ನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಬಳಿಕ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಆರು ವರ್ಷಗಳ ಹಿಂದೆ ಪೌರ ಕಾರ್ಮಿಕನಾಗಿ ನಗರ ಸಭೆಗೆ ಸೇರಿದ್ದ ಸಂದೀಪ್ ಅವರಿಗೆ ಕಳೆದ 13 ತಿಂಗಳಿಂದ ಸರಿಯಾಗಿ ವೇತನ ಪಾವತಿ ಆಗುತ್ತಿರಲಿಲ್ಲ. ಸಾಕಷ್ಟು ಸಾಲ ಮಾಡಿದ್ದು ಸಂಬಳ ಬಾರದೇ ಸಾಲದ ಹಣ ತೀರಿಸಲು ಆಗುತ್ತಿರಲಿಲ್ಲ. ಸಾಲ ನೀಡಿದವರು ನಿತ್ಯ ಮನೆಗೆ ಬಂದು ಹಣ ಮರಳಿಸುವಂತೆ ಒತ್ತಾಯಿಸುತ್ತಿದ್ದರು. ನಗರಸಭೆಯ ಪೌರಾಯುಕ್ತರಿಗೆ ವೇತನ ನೀಡುವಂತೆ ಕೋರಿದಾಗ, 'ನಿಮಗೆ ಸಾಲ ನೀಡುವವರು ಗುತ್ತಿಗೆದಾರರು. ಅವರ ಬಳಿ ಹಣ ಕೇಳಿ' ಎಂದು ಕಳುಹಿಸಿದ್ದಾರೆ.
ಈ ಬಗ್ಗೆ ಗುತ್ತಿಗೆದಾರರ ಬಳಿ ಪ್ರಸ್ತಾಪಿಸಿದಾಗ, 'ನಗರಸಭೆಯಿಂದ ಇನ್ನೂ ನನಗೆ ಚೆಕ್ ಕೊಟ್ಟಿಲ್ಲ. ನಾನು ಎಲ್ಲಿಂದ ವೇತನ ನೀಡಲಿ' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಪಾವತಿಯಾಗದ ವೇತನ, ಸಾಲಗಾರರ ಒತ್ತಡ ಹಾಗೂ ಅಧಿಕಾರಿಗಳ ಹಲ್ಲೆಯಿಂದ ತೀವ್ರ ಮನನೊಂದು ಸಂದೀಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.