ಚಿಂತಾಮಣಿ(ಚಿಕ್ಕಬಳ್ಳಾಪುರ): ಕೊರೊನಾ ಕಾಟದಿಂದ ಕಂಗಾಲಾಗಿರುವ ರೈತಾಪಿ ವರ್ಗಕ್ಕೆ ಈಗ ಈರುಳ್ಳಿ ಬೆಳೆಗೆ ಬೆಲೆ ಇದ್ದರು ಇತ್ತ ಮಳೆಯ ಅವಾಂತರ ಹಾಗೂ ರಫ್ತಿನ ಪ್ರಮಾಣ ಕುಸಿತದಿಂದ ಕಣ್ಣೀರು ಇಡುವಂತಾಗಿದೆ.
ತಾಲ್ಲೂಕಿನ ಭೂಮಿ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗ್ರಹಾರ ಗ್ರಾಮದ ರೈತನೊಬ್ಬ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದು, ಉತ್ತಮ ಬೆಳೆ ಇದ್ದರು ಕಣ್ಣೀರು ಇಡುವಂತಾಗಿದೆ. ಪ್ರತಿನಿತ್ಯ ಕೊರೊನಾ ಸೋಂಕು ತನ್ನ ಅಟ್ಟಹಾಸ ಮೆರಿಯುತ್ತಿದ್ದರು ರೈತರು ಎದೆಗುಂದದೆ ವಿವಿಧ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಆದರೆ ಲಾಕ್‌ಡೌನ್ ಸಡಿಲಿಕೆಯಾದರು ಬೇರೆ ರಾಜ್ಯ ಹಾಗೂ ದೇಶಗಳಿಗೆ ಈರುಳ್ಳಿ ರಫ್ತಿನ ಪ್ರಮಾಣ ಕಡಿಮೆಯಾಗಿದ್ದರಿಂದ ಬೆಳೆ ಬೆಳೆದ ರೈತ ಕಣ್ಣೀರಿಟ್ಟು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.
ಬೆಳೆಸಿದ್ದ ಈರುಳ್ಳಿಗೆ ಬೆಲೆ ಇಲ್ಲದೆ, ಮಳೆಯಿಂದ ಇಟ್ಟಿದ್ದ ಜಾಗದಲ್ಲಿಯೇ ಈರುಳ್ಳಿ ಕೊಳೆತು ಹೋಗಿದ್ದು ರೈತ ಬೇಸರ ವ್ಯಕ್ತಪಡಿಸಿದ್ದಾನೆ. ರೈತ ಚಂದ್ರಶೇಖರ್ ಸುಮಾರು ಎರಡುವರೆ ಎಕರೆಗೆ ಈರುಳ್ಳಿ ಬೆಳೆದಿದ್ದು ಕಟಾವು ಮಾಡುವ ಸಂದರ್ಭದಲ್ಲಿ ಈರುಳ್ಳಿ ರಫ್ತು ಆಗದ ಕಾರಣ ಬೆಳೆಸಿದ್ದ ಈರುಳ್ಳಿಗೆ ಬೆಲೆ ಇಲ್ಲದೆ, ಮಳೆಯಿಂದ ಇಟ್ಟಿದ್ದ ಜಾಗದಲ್ಲಿಯೇ ಈರುಳ್ಳಿ ಕೊಳೆತು ಹೋಗುವಂತಾಗಿದೆ ಎಂದು ಕಣ್ಣೀರಿಟ್ಟಿದ್ದಾನೆ. ಸುಮಾರು ಎರಡು ಲಕ್ಷದ ವರೆಗೂ ಬೆಳೆ ನಷ್ಟವಾಗಿದೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಎರಡುವರೆ ಎಕರೆಗೆ 250 ಮೂಟೆ ಆಗುವ ಈರುಳ್ಳಿ ಬೆಳೆಸಿದ್ದು, ಇಟ್ಟಿರುವ ಜಾಗದಲ್ಲಿ 100 ಮೂಟೆ ಕೊಳೆತು ಹೋಗಿದ್ದು, ಇನ್ನೂ ಇರುವ 150 ಮೂಟೆಗೆ ಬೆಲೆ ಇಲ್ಲದೆ ಹತ್ತು ದಿನ ಹಾಗೆಯೇ ಇಟ್ಟುಕೊಂಡಿದ್ದಾರೆ. ಮೊದಲು ಈರುಳ್ಳಿ ಒಂದು ಮೂಟೆಗೆ 1,400 ರಿಂದ 1,500 ರೂಪಾಯಿ ಬೆಲೆ ಇತ್ತು ಈಗ ಬೆಲೆಯಲ್ಲಿಯೂ ಗಣನೀಯವಾಗಿ ಇಳಿಕೆ ಕಂಡಿದ್ದು ಹಾಕಿದ ಬೆಳೆಗೆ ಖರ್ಚುವೆಚ್ಚಗಳು ಸಹ ಬರುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ರೈತ ಬೆಳೆದಿದ್ದ ಬೆಳೆಗೆ ನಷ್ಟ ಪರಿಹಾರವನ್ನು ನೀಡಬೇಕೆಂದು ಸರ್ಕಾರಕ್ಕೆ ಮತ್ತು ಕ್ಷೇತ್ರದ ಶಾಸಕರಿಗೆ ಹಾಗೂ ತಹಶಿಲ್ದಾರ್ ಅವರಿಗೆ ಮನವಿ ಮಾಡಿಕೊಂಡಿದ್ದು, ಸರ್ಕಾರ ಹಾಗೂ ಜನನಾಯಕರು ಇತ್ತ ಗಮನ ಹರಿಸುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.