ಚಿಕ್ಕಬಳ್ಳಾಪುರ: ಪತ್ನಿಯ ಹೆಸರು ಶಾಶ್ವತವಾಗಿರಬೇಕೆಂದು ಜ್ಞಾಪಕಾರ್ಥಕವಾಗಿ ನಿವೃತ್ತ ತಹಶೀಲ್ದಾರ್ವೊಬ್ಬರು ಸ್ವಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಮಾದರಿಯಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆಟ್ಟೂರುನಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕಿನ ಕೈವಾರ ಹೋಬಳಿ ತಳಗವಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಟ್ಟೂರು ಗ್ರಾಮದ ನಿವೃತ್ತ ತಹಶೀಲ್ದಾರ್ ವೆಂಕಟೇಶಯ್ಯ ತಮ್ಮ ಧರ್ಮಪತ್ನಿ ವಿಜಯಲಕ್ಷ್ಮಮ್ಮ ನೆನಪಿಗಾಗಿ ಗ್ರಾಮದ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ಬಳಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ, ನೀರಿನ ಹಾಹಾಕಾರ ತಪ್ಪಿಸಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ ನಿವೃತ್ತ ತಹಶೀಲ್ದಾರ್ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯನ್ನು ಕಾಗತಿ ಗ್ರಾಮ ಪಂಚಾಯತ ಅಧ್ಯಕ್ಷ ನಾಗರಾಜ್ ಹಾಗೂ ತಳಗವಾರ ಗ್ರಾಮ ಪಂಚಾಯತ್ ಅಧ್ಯಕ್ಷ ತಳಗವಾರ ಮಂಜುನಾಥ್ ಮಾಡಿದ್ದು, ಈ ಸಂದರ್ಭದಲ್ಲಿ ನಿವೃತ್ತ ತಹಶೀಲ್ದಾರ್ ವೆಂಕಟೇಶಯ್ಯ, ಮಾಜಿ ಗ್ರಾ.ಪಂ ಅಧ್ಯಕ್ಷ ವಿ.ಎಸ್ ರಾಜಣ್ಣ, ಸುಬ್ಬಣ್ಣ, ವೈಜಕೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ನಾಗರಾಜ್, ಗ್ರಾ. ಪಂ ಸದಸ್ಯರಾದ ನರಸಿಂಹಮೂರ್ತಿ, ಸವಿತಾ ನರಸಿಂಹಮೂರ್ತಿ, ಸುನೀಲ್ ಸೇರಿದಂತೆ ಅಟ್ಟೂರು ಗ್ರಾಮಸ್ಥರು ಉಪಸ್ಥಿತರಿದ್ದರು.
ಒಟ್ಟಿನಲ್ಲಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಕಿಲೋ ಮೀಟರ್ಗಟ್ಟಲೇ ಪರದಾಟ ನಡೆಸಬೇಕಿತ್ತು. ಆದರೆ ಪತ್ನಿಯ ನೆನಪಿಗಾಗಿ ವೆಂಕಟೇಶಯ್ಯ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿರುವುದಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.