ಶಿಡ್ಲಘಟ್ಟ:ತಾಲೂಕಿನ ಕನ್ನಮಂಗಲ ಗ್ರಾಮದ ನಿವಾಸಿ ವೆಂಕಟಪ್ಪ ಎಂಬ ವೃದ್ಧನಿಗೆ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಅಕ್ಕಿ ನಿರಾಕರಿಸಿರುವ ಘಟನೆ ನಡೆದಿದೆ.
ರೇಶನ್ ನೀಡಿ ಸಹಕರಿಸಿ ಎಂದು ವೃದ್ಧ ವ್ಯಕ್ತಿ ಅಳಲು ತೋಡಿಕೊಂಡಿದ್ದಾರೆ. ಮೂಲ ದಾಖಲೆಗಳಿದ್ದರೂ ಸುಮಾರು 9 ತಿಂಗಳುಗಳಿಂದ ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ಬರುತ್ತಿಲ್ಲ ಎಂಬ ನೆಪದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ನೀಡುತ್ತಿಲ್ಲ. ಕೊರೊನಾ ಲಾಕ್‌ಡೌನ್ ಹಿನ್ನೆಲೆ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ ಅನ್ನೋದು 95 ವರ್ಷದ ವೃದ್ಧ ವೆಂಕಟಪ್ಪನವರ ಅಳಲು.
ಡೆಂಗಿ ಜ್ವರ ಬಂದು ಕೆಲವು ದಿನಗಳು ಆಸ್ಪತ್ರೆಯಲ್ಲಿದ್ದೆ. ಈಗ ಸರ್ಕಾರದಿಂದ ಸಿಗುವ ಅಕ್ಕಿಯನ್ನೂ ಪಡೆಯಲಾಗುತ್ತಿಲ್ಲ. ಆರೋಗ್ಯ ಚೇತರಿಸಿಕೊಂಡು ಮನೆಗೆ ಬಂದ ನಂತರ ನ್ಯಾಯ ಬೆಲೆ ಅಂಗಡಿಗೆ ಅಕ್ಕಿ ಪಡೆದುಕೊಳ್ಳಲು ಹೋದರೆ ನಿಮ್ಮ ಬೆರಳಚ್ಚು ಬರುತ್ತಿಲ್ಲ, ಕೊಡಲು ಆಗುವುದಿಲ್ಲ ಎಂದು ಹೇಳುವುದಾಗಿ ಇವರು ನೋವು ತೋಡಿಕೊಂಡರು.
ಆಹಾರ ಇಲಾಖೆಯವರನ್ನು ಎಷ್ಟು ಸಾರಿ ಸಂಪರ್ಕ ಮಾಡಿದರೂ ಸ್ಪಂದಿಸುತ್ತಿಲ್ಲ. ನನಗೆ ಮೂರು ಜನ ಗಂಡು ಮಕ್ಕಳಿದ್ದು ಅವರಲ್ಲಿ ಒಬ್ಬ ಮಗ ಮರಣ ಹೊಂದಿದ್ದಾನೆ. ಇನ್ನಿಬ್ಬರು ಮಕ್ಕಳು ನನ್ನ ಸಾಕುತ್ತಿಲ್ಲ, ಒಬ್ಬಳು ಹೆಣ್ಣು ಮಗಳು ಮಾನಸಿಕ ಅಸ್ವಸ್ಥೆಯಾಗಿದ್ದಾಳೆ. ಇಂಥ ಪರಿಸ್ಥಿತಿಯಲ್ಲಿ ಜೀವನ ನಿಭಾಯಿಸಲು ಕಷ್ಟವಾಗುತ್ತಿದೆ. ದಯವಿಟ್ಟು ಸಂಬಂಧಿಸಿದವರು ನನಗೆ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರವನ್ನು ಕೊಡಿಸಿ, ನನ್ನ ಜೀವನೋಪಾಯಕ್ಕೆ ದಾರಿ ಮಾಡಿಕೊಡುವಂತೆ ಕೋರಿದ್ದಾರೆ.