ಚಿಕ್ಕಬಳ್ಳಾಪುರ: ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಷ್ಟ ಎಂಬ ಮಾತಿದೆ. ಆದರೆ, ಇಲ್ಲಿ ಇಲಿಗಳ ಆಟ ಪೊಲೀಸರಿಗೆ ಸಂಕಷ್ಟ ಎಂಬಂತಾಗಿತ್ತು. ಪರಿಣಾಮ ಜಿಲ್ಲೆಯ ಗೌರಿಬಿದನೂರು ಪೊಲೀಸರು ಸಾಂಪ್ರದಾಯಿಕ ಪ್ಲಾನ್ ಅಳವಡಿಸಿಕೊಂಡು ಗಮನ ಸೆಳೆದಿದ್ದಾರೆ.
ಪೊಲೀಸರು ಬೆಕ್ಕುಗಳನ್ನು ಸಾಕುವ ಆಲೋಚನೆಗೆ ಮುಂದಾಗಿದ್ದಾರೆ. ನಗರದಲ್ಲಿರುವ ಪೊಲೀಸ್ ಠಾಣೆಯಲ್ಲಿ ಸೈನ್ಯದಂತೆ ನುಗ್ಗಿ ಬರುವ ಇಲಿಗಳು ಮಹತ್ವದ ದಾಖಲೆಗಳನ್ನು ಕಚ್ಚಿ ಹಾಳು ಮಾಡುತ್ತಿದ್ದವು. ಇದರಿಂದ ಇಲ್ಲಿನ ಪೊಲೀಸರಿಗೆ ಭಾರಿ ತಲೆನೋವು ಉಂಟಾಗಿತ್ತು. ಇದೆಲ್ಲವನ್ನು ಮನಗಂಡು ಬೆಕ್ಕುಗಳನ್ನು ಸಾಕುತ್ತಿದ್ದಾರೆ.
ಇಲಿಗಳ ಆಟ ಪೊಲೀಸರಿಗೆ ಸಂಕಷ್ಟ: ಠಾಣೆಯಲ್ಲೇ ಬೆಕ್ಕು ಸಾಕಲು ಮುಂದಾದ ಪೊಲೀಸರು ಬೆಕ್ಕುಗಳನ್ನು ಮನೆಯಲ್ಲಿ ಸಾಕುವುದು ಸಾಮಾನ್ಯ. ಆದರೆ, ಈಗ ಪೊಲೀಸ್ ಠಾಣೆಯಲ್ಲೂ ಸಾಕಲು ಮುಂದಾಗಿರುವುದಕ್ಕೆ ಕಾರಣ ಇಲಿಗಳೇ ಎಂದು ಹೇಳಬಬಹುದು. ಈ ಹಿಂದೆ ಠಾಣೆಯಲ್ಲಿ ಇಲಾಖೆಯ ಮಹತ್ವದ ದಾಖಲೆಗಳನ್ನು ಇಲಿಗಳ ಕಾಟದಿಂದ ರಕ್ಷಿಸಿಕೊಳ್ಳಲಾಗದೇ ಸಾಕಷ್ಟು ಪರದಾಟ ನಡೆಸುವಂತಾಗಿತ್ತು. ಆದರೆ, ಇತ್ತೀಚೆಗೆ ಠಾಣೆಗೆ ಎರಡು ಬೆಕ್ಕುಗಳನ್ನು ತರಲಾಗಿದ್ದು, ಹೊಸ ಅಧಿಕಾರಿಯ ಆಗಮನದಿಂದ ಈಗ ನಮ್ಮ ಕೆಲಸ ಸಲೀಸಾಗಿದೆ. ಅಲ್ಲದೇ ಕಳ್ಳ ಇಲಿಗಳಿಂದ ಆಗುವ ಅನಾಹುತಗಳು ಕಡಿಮೆಯಾಗಿವೆ ಎನ್ನುತ್ತಾರೆ ಇಲ್ಲಿಯ ಪೊಲೀಸ್ ಸಿಬ್ಬಂದಿ.
ಬೆಕ್ಕನ್ನು ಠಾಣೆಯಲ್ಲಿ ಸಾಕಲು ಮುಂದಾದ ಜಿಲ್ಲಾ ಪೊಲೀಸ್ ಕಾರ್ಯವೈಖರಿಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಕಾಂಗ್ರೆಸ್ನ ಪ್ರಬಲರ ಮೇಲೆ ಬಿಜೆಪಿ ಇಡಿ ಪ್ರಯೋಗ.. ಇವರ ಆಟ ಬಹಳ ದಿನ ನಡೆಯೋದಿಲ್ಲ.. ಡಿಕೆಶಿ