ಚಿಕ್ಕಬಳ್ಳಾಪುರ:ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಸಮೀಪದ ವೆಂಕಟಪುರ ಬಳಿರಾಗಿ ಹೊಲದಲ್ಲಿ ಬೃಹತ್ ಗಾತ್ರದ ಹೆಬ್ಬಾವುವೊಂದು ಪತ್ತೆಯಾಗಿದೆ.
ಹೆಬ್ಬಾವು ಸಂರಕ್ಷಿಸಿ ಅರಣ್ಯಕ್ಕೆ ಬಿಟ್ಟ ಅರಣ್ಯಾಧಿಕಾರಿಗಳು ರಾಗಿ ಹೊಲದಲ್ಲಿ ಪ್ರಾಣಿಯೊಂದನ್ನು ಬೇಟೆಯಾಡಿದ್ದ ಈ ಹಾವನ್ನು ಗ್ರಾಮಸ್ಥರು ಕಂಡು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿ ಯಲ್ಲಪ್ಪ ಮತ್ತು ಸಿಬ್ಬಂದಿ ಬೃಹತ್ ಗಾತ್ರದ ಹೆಬ್ಬಾವುಅನ್ನು ಸಂರಕ್ಷಿಸಿ ಜಿಲ್ಲೆಯ ಗುಡಿಬಂಡೆ ಹೊರವಲಯದ ಕಾಡಿನಲ್ಲಿ ಬಿಟ್ಟಿದ್ದಾರೆ.
ಗ್ರಾಮದ ಸುತ್ತಮುತ್ತ ಬೆಟ್ಟ-ಗುಡ್ಡಗಳು ಇರುವುದರಿಂದ ಬೃಹತ್ ಗಾತ್ರದ ಹಾವುಗಳು ಬರುವುದು ಸಹಜ. ಅವು ಬೇಟಿಯಾಡಿದ ನಂತರ ಬೇರೊಂದು ಕಡೆ ಹೋಗಲು ಸಾಧ್ಯವಾಗದ ಹಿನ್ನೆಲೆ ಅಲ್ಲೇ ಕೆಲಕಾಲ ಇರುತ್ತವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹೆಬ್ಬಾವು 35 ಕೆಜಿ ತೂಕ ಹಾಗೂ 12 ಅಡಿ ಉದ್ದವಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿತ್ತು. ಈ ಹಾವನ್ನು ಹಿಡಿಯುವ ದೃಶ್ಯವನ್ನು ಕಂಡು ಸ್ಥಳೀಯರು ನಿಬ್ಬೆರಗಾಗಿದ್ದಾರೆ.