ಚಿಂತಾಮಣಿ: ಚಿಂತಾಮಣಿ ನಗರಕ್ಕೆ ಒಂದು ವಿಶೇಷತೆಯಿದೆ ಮತ್ತು ಒಂದು ಪರಂಪರೆಯೇ ಇದೆ. ಪೊಲೀಸ್ ಇಲಾಖೆ ಕೆಲಸ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಗರ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಉದ್ಘಾಟಿಸಿದರು. ಕಾರ್ಯಕ್ರಮದ ವೇಳೆ ಸಾರ್ವಜನಿಕರು ಮತ್ತು ನಗರಸಭೆ ಸದಸ್ಯರು ಹಲವಾರು ಸಮಸ್ಯೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಇಟ್ಟಿದ್ದಾರೆ.
ಚಿಂತಾಮಣಿ ತಾಲೂಕಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಅದನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಯಾವುದೇ ರೀತಿ ಕ್ರಮ ಕೈಗೊಳ್ಳದೆ ನೋಡಿಯೂ ನೋಡದಂತೆ ಹೋಗುತ್ತಿದ್ದಾರೆ. ಹಾಗಾಗಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಟ್ರಾಫಿಕ್ ಸಮಸ್ಯೆ ಇದೆ. ಸರ್ಕಾರಿ ಬಸ್ಗಳ ಕೊರತೆಯಿದ್ದು, ಖಾಸಗಿ ಬಸ್ಸುಗಳ ಮೇಲೆ ವಿದ್ಯಾರ್ಥಿಗಳು ಕುಳಿತುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ. ಕೆಲ ಯುವಕರು ರಾತ್ರಿ ವೇಲೆ ವ್ಹೀಲಿಂಗ್ ಮಾಡಿ ಶಬ್ಧ ಮಾಲಿನ್ಯ ಉಂಟುಮಾಡುತ್ತಿದ್ದಾರೆ. ನಗರದ ಹೊರವಲಯದಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಪುಂಡ ಪೋಕರಿಗಳು ಹೆಣ್ಣುಮಕ್ಕಳಿಗೆ ಚುಡಾಯಿಸುವ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಜಿಲ್ಲಾ ವರಿಷ್ಠಾಧಿಕಾರಿಗಳ ಮುಂದಿಟ್ಟರು.