ಚಿಕ್ಕಬಳ್ಳಾಪುರ:ಅನೈತಿಕ ಸಂಬಂಧ ಹಿನ್ನೆಲೆ ಮಹಿಳೆಯನ್ನು ಠಾಣೆಗೆ ಕರೆತಂದು ಪಿಎಸ್ಐ ಹಾಗೂ ಕಾನ್ಸ್‌ಟೇಬಲ್ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕಾರ್ಮಿಕ ಮಹಿಳೆ ಮೇಲೆ ಪಿಎಸ್ಐ ದರ್ಪ ವಿಡಿಯೋ ಒರಿಸ್ಸಾ ಮೂಲದ ಮಹಿಳೆ ದಿಬ್ಬೂರಹಳ್ಳಿ ಬಳಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದರು. ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಪಾಪಣ್ಣ ಕಾರ್ಮಿಕ ಮಹಿಳೆಯನ್ನು ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ.
ಮಹಿಳೆ ಬಗ್ಗೆ ಅನೈತಿಕ ಸಂಬಂಧ ಕುರಿತು ಮೌಕಿಕ ದೂರಿನ ಮೇಲೆ ಮಹಿಳೆಯನ್ನು ಕರೆ ತಂದ ಪಿಎಸ್ಐ ಪಾಪಣ್ಣ ಮಹಿಳೆ ಎನ್ನುವುದನ್ನೂ ಲೆಕ್ಕಿಸದೆ ಮನ ಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಓದಿ:ಅಲಿಗಢ ವಿವಿ ವಿದ್ಯಾರ್ಥಿಗಳಿಂದ ಹೈಬ್ರಿಡ್ ಎಲೆಕ್ಟ್ರಿಕ್ ವಾಹನ ವಿನ್ಯಾಸ.. ಎಪಿಸೈಕಲ್ ಸ್ಪರ್ಧೆಯಲ್ಲಿ 5ನೇ ಸ್ಥಾನ
ಠಾಣೆಗೆ ಕರೆತಂದ ಮಹಿಳೆಯನ್ನು ನೆಲದ ಮೇಲೆ ಕುರಿಸಿ ಲಾಠಿಯಿಂದ ಪಾದಗಳಿಗೆ ಹೊಡೆದಿದ್ದಾರೆ. ಪೊಲೀಸ್ ಕಾನ್ಸ್‌ಟೇಬಲ್ ಮಹಿಳೆಯನ್ನು ಬೂಟು ಕಾಲಿಗಳಿಂದ ಒದ್ದು ಹಲ್ಲೆ ಮಾಡಿದ್ದಾರೆ. ಸದ್ಯ ಪಿಎಸ್ಐ ಪಾಪಣ್ಣ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ಸಾರ್ವಜನಿಕರು ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕ ಮಹಿಳೆ ಮೇಲೆ ಪಿಎಸ್ಐ ದರ್ಪ ವಿಡಿಯೋ ಹಲ್ಲೆಗೆ ಒಳಗಾದ ಮಹಿಳೆ ಸುಲೋಚನಾ ಕೆಲಸ ಮಾಡುತ್ತಿದ್ದ ಇಟ್ಟಿಗೆ ಕಾರ್ಖಾನೆಯಲ್ಲಿ ಆಕೆಯ ಸಂಬಂಧಿ, ಪರಿಚಿತ ವ್ಯಕ್ತಿ ಕೂಡ ಕೆಲಸ ಮಾಡುತ್ತಿದ್ದ. ಸುಲೋಚನಾ ಗಂಡ ಮಾಧವ್ ಪ್ರತಿ ದಿನ ಕುಡಿದು ಬಂದು ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದ. ಇದರಿಂದ ಬೇಸತ್ತಿದ್ದ ಸುಲೋಚನಾ ತನ್ನ ಸಂಬಂಧಿಯ ಜೊತೆ ಓಡಿ ಹೋಗಿದ್ದಳು. ಇವರಿಬ್ಬರು ಹಠಾತ್ ನಾಪತ್ತೆಯಾದ ಕಾರಣ ಇಟ್ಟಿಗೆ ಕಾರ್ಖಾನೆ ಮಾಲೀಕ ಡಿ.ಜಿ ರಾಮಚಂದ್ರ ಈ ಬಗ್ಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಅವರಿಬ್ಬರನ್ನು ಠಾಣೆಗೆ ಕರೆತಂದು ಬುದ್ದಿ ಹೇಳಿದ್ದರು.
ತನ್ನ ಗಂಡನ ಬಳಿ ಮರಳಲು ನಿರಾಕರಿಸಿದ ಮಹಿಳೆಯನ್ನು ಪಿಎಸ್ಐ ಪಾಪಣ್ಣ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಹಲ್ಲೆ ಮಾಡಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ಘಟನೆ ಸಂಬಂಧ ಮಾನವ ಹಕ್ಕುಗಳು ಮತ್ತು ಮಾಧ್ಯಮ ಸಂಘಟನೆ ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಮಹಿಳೆ ಮೇಲಿನ ಹಲ್ಲೆ ಖಂಡಿಸಿದ್ದಾರೆ.