ಚಿಕ್ಕಬಳ್ಳಾಪುರ: ಜನಭಿಪ್ರಾಯವಿಲ್ಲದೆ ಏಕಾಏಕಿ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿದ ಸರ್ಕಾರದ ನಿರ್ಧಾರದ ವಿರುದ್ದ ಗೌರಿಬಿದನೂರು ತಾಲೂಕಿನ ತೊಂಡೆಬಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಮುಖಂಡ ಜೆ. ಕಾಂತ್ ರಾಜ್ ಮಾತನಾಡಿ, ಸರ್ಕಾರ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿರುವುದು ಸ್ವಾಗತಾರ್ಹ. ಅದರೆ ತೊಂಡೆಬಾವಿ, ಡಿ.ಪಾಳ್ಯ, ನಾಮಗೊಂಡ್ಲು ಗ್ರಾಮಗಳನ್ನು ಮಂಚೇನಹಳ್ಳಿ ತಾಲೂಕಿಗೆ ಸೇರಿಸುವುದಕ್ಕೆ ನಮ್ಮ ವಿರೋಧವಿದೆ. ಗೌರಿಬಿದನೂರು ತಾಲೂಕಿನಿಂದ ಇಲ್ಲಿಗೆ ಬರಲು ಬಸ್ ಸಂಪರ್ಕವಿದ್ದು, ಜೊತೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೋಗಿ ಬರಲು ಸುಲಭ ಮಾರ್ಗ ಇದಾಗಿದೆ. ಆದರೆ ಕೆಲ ರಾಜಕೀಯ ವ್ಯಕ್ತಿಗಳ ಹಿತಕ್ಕಾಗಿ ಈ ಭಾಗವನ್ನು ಮಂಚೇನಹಳ್ಳಿ ತಾಲೂಕಿಗೆ ಸೇರಿಸಲಾಗುತ್ತಿದೆ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.