ಚಿಕ್ಕಬಳ್ಳಾಪುರ: ಜಾರ್ಖಂಡ್‌ನಲ್ಲಿ ತಬ್ರೇಜ್ ಅನ್ಸಾರಿ ಎಂಬ ಯುವಕನ ಮೇಲೆ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರವಾಸಿ ಮಂದಿರದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ತಾಲೂಕು ಕಚೇರಿಗೆ ತೆರಳಿ ದಂಡಾಧಿಕಾರಿಗಳಾದ ಎಸ್.ಎಲ್.ವಿಶ್ವನಾಥ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಜಾರ್ಖಂಡ್‌ನಲ್ಲಿ ನಡೆದ ಯುವಕನ ಹತ್ಯೆ ಖಂಡಿಸಿ ಪ್ರತಿಭಟನೆ ಈ ವೇಳೆ ಮಾತನಾಡಿದ ಹೋರಾಟಗಾರರು, ವಿವಿಧತೆಯಲ್ಲಿ ಏಕತೆ ಮೆರೆಯುವ ದೇಶದಲ್ಲಿ ಇತ್ತೀಚೆಗೆ ಕೆಲ ಕಿಡಿಗೇಡಿಗಳು ಜಾತಿ, ಧರ್ಮಗಳ ನಡುವೆ ಕಿಡಿ ಹೊತ್ತಿಸುತ್ತಿದ್ದಾರೆ. ಗುಂಪು ಘರ್ಷಣೆಗಳು, ಹತ್ಯೆ ಪ್ರಕರಣಗಳಿಂದಾಗಿ ದಲಿತರು, ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಾರ್ಖಂರ್ಡ್‌ನಲ್ಲಿ ತಬ್ರೇಜ್ ಎಂಬ ಯುವಕನನ್ನು ಕೆಲ ಕಿಡಿಗೇಡಿಗಳು 12 ಗಂಟೆ ವರೆಗೆ ಕಂಬಕ್ಕೆ ಕಟ್ಟಿ ಹಾಕಿ, ಥಳಿಸಿ, ಹತ್ಯೆ ಮಾಡಿದ್ದಾರೆ. ಪೊಲೀಸರ ನಿರ್ಲಕ್ಷ್ಯದಿಂದಾಗಿ ತಬ್ರೇಜ್ ಬಲಿಯಾಗಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ತುರ್ತಾಗಿ ಕ್ರಮಕೈಗೊಳ್ಳಬೇಕಾಗಿದೆ. ಅಲ್ಪಸಂಖ್ಯಾತರ ರಕ್ಷಣೆ ಸರ್ಕಾರ ಮುಂದಾಗಬೇಕಿದೆ ಎಂದು ಮನವಿ ಮಾಡಿದರು.