ಚಿಕ್ಕಬಳ್ಳಾಪುರ :ಜೈಲು ಅಧಿಕಾರಿಗಳು ಕೊಟ್ಟ ಸಲುಗೆಯನ್ನು ಸದುಪಯೋಗ ಪಡೆದ ಕೈದಿಯೊಬ್ಬ ಜೈಲಿನಿಂದ ಪರಾರಿಯಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಉಪ ಕಾರಾಗೃಹದಲ್ಲಿ ನಡೆದಿದೆ.
ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಜೈಲಿಗೆ ಬಂದಿದ್ದ ಆಂಧ್ರ ಮೂಲದ ಶಂಕರಪ್ಪ ಬಿನ್ ರವಣಪ್ಪ ಎಂಬ ವಿಚಾರಣಾಧೀನ ಕೈದಿ ಕಾರಾಗೃಹ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಉಪ ಕಾರಾಗೃಹಕ್ಕೆ ಪ್ರತಿನಿತ್ಯ ಸ್ಯಾನಿಟೈಸರ್ ಸಿಂಪಡಣೆ ಮಾಡುತ್ತಿದ್ದು, ನಿನ್ನೆ ಅಂದರೆ ಮಂಗಳವಾರ ರಾತ್ರಿ ಜೈಲಿನ ಗೋಡೆಗಳಿಗೆ, ಗೇಟ್ ಮತ್ತು ಸುತ್ತಮುತ್ತ ಸ್ಯಾನಿಟೈಸರ್ ಸಿಂಪಡಿಸುವಂತೆ ಜೈಲು ಅಧಿಕಾರಿಗಳು ವಿಚಾರಣಾಧೀನ ಕೈದಿ ಶಂಕರಪ್ಪನಿಗೆ ತಿಳಿಸಿದ್ದಾರೆ. ಈ ವೇಳೆ ಸ್ಯಾನಿಟೈಸರ್ ಸಿಂಪಡಣೆ ಮಾಡುವಂತೆ ನಾಟಕ ಮಾಡಿ ಜೈಲಿನ ಗೋಡೆ ಹಾರಿ ಪರಾರಿಯಾಗಿದ್ದಾನೆ.
ಕೈದಿ ಪರಾರಿಯಾದ ವಿಷಯ ತಿಳಿದ ಕೂಡಲೆ ಜೈಲಿನ ಅಧಿಕಾರಿಗಳು ಚಿಂತಾಮಣಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಟ್ಲಹಳ್ಳಿ ಗ್ರಾಮಾಂತರ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಜೈಲಿಗೆ ಬಂದಿದ್ದ ಆಂಧ್ರ ಮೂಲದ ಶಂಕರಪ್ಪ ಬಿನ್ ರವಣಪ್ಪ ಎಂಬ ಕೈದಿ ಮಂಗಳವಾರ ಜೈಲಿನ ಗೋಡೆ ಧುಮುಕಿ ಪರಾರಿಯಾಗಿದ್ದಾನೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲನೆ ಮಾಡಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಮಿಥುನ್ ಕುಮಾರ್ ತಿಳಿಸಿದ್ದಾರೆ.