ಚಿಕ್ಕಬಳ್ಳಾಪುರ: ಕಾಸ್ಟಿಂಗ್ ಸೋಡಾ ಮಿಕ್ಸ್ ಮಾಡುವ ವೇಳೆ ಸ್ಫೋಟ ಸಂಭವಿಸಿ ಐದು ಜನ ಕಾರ್ಮಿಕರು ಗಂಭೀರ ಗಾಯಗೊಂಡಿದ್ದ ಪ್ರಕರಣದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.
ಜಿಲ್ಲೆಯ ಗೌರಿಬಿದನೂರು ತಾಲೂಕು ವ್ಯಾಪ್ತಿಯ ಪ್ರಿಕಾಟ್ ಇಂಡಸ್ಟ್ರಿ ಲಿಮಿಟೆಡ್ನಲ್ಲಿ ಕಳೆದ ಗುರುವಾರ ಸ್ಫೋಟ ಸಂಭವಿಸಿತ್ತು. ಅವಘಡ ನಡೆದ ವೇಳೆ ಕಂಪನಿಯಲ್ಲಿ 100ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹರೀಶ್ (32 ) ಕರಗತ್ತೂರು, ವೆಂಕಟೇಶ್ (42) ರಾಮಚಂದ್ರಪುರ ಗೌರಿಬಿದನೂರು, ರವಿಕುಮಾರ್ (39) ಚಿಕ್ಕಕೊರುಗೂಡು, ಆನಂದ್ ಕುಮಟರ್ (32) ಚೇಳೂರು, ಗೊರವಯ್ಯ (29) ವೆಂಕಟಗಿರಿ ನೆಲ್ಲೂರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಆದರೆ, ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಭೇಟಿ ಪರಿಶೀಲನೆ ನಡೆಸಿದ್ದರು. ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.