ಗೌರಿಬಿದನೂರು: ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆ ಗ್ರಾಮೀಣ ಪ್ರದೇಶದಲ್ಲಿ ಸೀರೆ ಹಂಚುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದ ಘಟನೆ ಗೌರಿಬಿದನೂರು ತಾಲೂಕಿನಲ್ಲಿ ಹೆಚ್ಚಾಗಿದೆ.
ಸೀರೆ ಹಂಚುವ ಮೂಲಕ ಸ್ಥಳೀಯ ಚುನಾವಣೆಗೆ ಸಿದ್ಧತೆ! ಗೌರಿಬಿದನೂರು ವಿಧಾನಸಭಾ ಕ್ಷೇತ್ರ ಪ್ರತೀ ಬಾರಿಯೂ ರಾಜ್ಯದ ಗಮನ ಸೆಳೆಯುವಂತ ಕ್ಷೇತ್ರವಾಗಿದೆ. ಕಳೆದ ಎರಡೂವರೆ ದಶಕದಿಂದ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿ ಬರುತ್ತಿರುವ ಎನ್.ಹೆಚ್.ಶಿವಶಂಕರ ರೆಡ್ಡಿ, ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಸೇವೆ ಮಾಡಿದ್ದು, ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ ಇತ್ತೀಚೆಗೆ ಗೌರಿಬಿದನೂರು ವಿಧಾನಸಭಾ ಕ್ಷೇತ್ರಕ್ಕೆ ಸಮಾಜ ಸೇವಕ ಪುಟ್ಟಸ್ವಾಮಿಗೌಡರ ಆಗಮನದಿಂದ ಸ್ಥಳೀಯವಾಗಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಕಾಂಗ್ರೆಸ್ ಪಕ್ಷದಲ್ಲಿ ಇದ್ದಂತಹ ಕೆಲ ನಾಯಕರು ಪಕ್ಷ ತೊರೆದು ಪುಟ್ಟಸ್ವಾಮಿ ಗೌಡರ ಬಣಕ್ಕೆ ಸೇರ್ಪಡೆಯಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಶಾಸಕ ಶಿವಶಂಕರರೆಡ್ಡಿ ಅವರನ್ನು ಸೋಲಿಸಲು ಸ್ಥಳೀಯ ಚುನಾವಣೆಯಿಂದಲೇ ವೇದಿಕೆ ಸಿದ್ಧ ಮಾಡಿದಂತಿದೆ.
ಲಾಕ್ಡೌನ್ ಸಮಯದಲ್ಲಿ ಗೌರಿಬಿದನೂರು ಜನತೆಗೆ ಪುಟ್ಟಸ್ವಾಮಿ ಗೌಡರ ವತಿಯಿಂದ ಸುಮಾರು ಐವತ್ತು ಸಾವಿರ ದಿನಸಿ ಕಿಟ್ ನೀಡಿದ್ದಾರೆ. ನಗರ ಪ್ರದೇಶದಲ್ಲಿ ಪ್ರತೀ ವಾರ್ಡ್ಗೂ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಬರುವ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ತಮ್ಮ ಬಣದ ವತಿಯಿಂದ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿಕೊಂಡಿದ್ದಾರೆ.
ಇದರ ನಡುವೆ ಇಂದು ಹೊಸೂರು ಹೋಬಳಿಯ ಕುರುಡಿ, ಕುರುಬರಪಾಳ್ಯ, ಸೋನಗಾನಹಳ್ಳಿ ಹಾಗೂ ಹೋಬಳಿಯ ಸುಮಾರು ಹತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸೀರೆ ನೀಡುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ ಎನ್ನಲಾಗಿದೆ.