ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಜಿಲ್ಲಾ ಪೊಲೀಸ್ ಇಲಾಖೆ ಸಕಲ ಸಿದ್ಧತೆ ನಡೆಸುತ್ತಿದ್ದು ಸೂಕ್ತ ಭದ್ರತೆ ಹಿನ್ನೆಲೆ ಒಟ್ಟು 854 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ಚಿಕ್ಕಬಳ್ಳಾಪುರ, ಗೌರಿಬಿದನೂರು, ಗುಡಿಬಂಡೆ ತಾಲೂಕಿನ ಒಟ್ಟು 68 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 1095 ಸದಸ್ಯ ಸ್ಥಾನಗಳಿಗೆ ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಅದರಲ್ಲಿ 53 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 2974 ಮಂದಿ ಚುನಾವಣೆಗೆ ಸಿದ್ದರಾಗಿದ್ದಾರೆ.
ಇದನ್ನೂ ಓದಿ : ಡಿಸಿಎಂ ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ ಗ್ರಾಪಂ ಚುನಾವಣೆ ಬಹಿಷ್ಕರಿಸಿದ ಖವಟಕೊಪ್ಪ ಗ್ರಾಮಸ್ಥರು
ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ವಹಿಸಿದೆ. ಮೂರು ತಾಲೂಕು ವ್ಯಾಪ್ತಿಯಲ್ಲಿ ಅತಿಸೂಕ್ಷ್ಮ ಮತಗಟ್ಟೆಗಳು 55, ಸೂಕ್ಷ್ಮ 84, ಸಾಮಾನ್ಯ ಮತಗಟ್ಟೆಗಳು 445 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದ್ದು ಒಟ್ಟು 584 ಮತಗಟ್ಟೆಗಳ ಪೈಕಿ 23 ಮತಗಟ್ಟೆಗಳಲ್ಲಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಚುನಾವಣೆ ಸಂದರ್ಭಗಳಲ್ಲಿ ಶಾಂತಿ, ಸುವ್ಯವಸ್ಥೆ, ಭದ್ರತೆಯನ್ನು ಕಾಪಾಡಲು ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಗೆ 295, ಗೌರಿಬಿದನೂರ ತಾಲೂಕಿಗೆ 442 ಮತ್ತು ಗುಡಿಬಂಡೆ ತಾಲೂಕಿಗೆ 117 ಪೊಲೀಸ್ ಅಧಿಕಾರಿ ಸೇರಿದಂತೆ ಸಿಬ್ಬಂದಿ ಹಾಗೂ ಗೃಹರಕ್ಷಕ ದಳವನ್ನು ನಿಯೋಜನೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.