ಚಿಕ್ಕಬಳ್ಳಾಪುರ:ಕರ್ನಾಟಕ ವಿಧಾನಸಭೆಗೆ ಶೀಘ್ರವೇ ಚುನಾವಣೆ ಘೋಷಣೆಯಾಗಲಿದ್ದು, ನೀತಿ ಸಂಹಿತೆ ಜಾರಿಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ್ಯಕ್ಕೆ ಒಂದು ದಿನದ ಭೇಟಿ ನೀಡಿದ್ದಾರೆ. ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಗಳು, ನೇರವಾಗಿ ಚಿಕ್ಕಬಳ್ಳಾಪುರಕ್ಕೆ ತೆರಳಿದರು. ನೂತನವಾಗಿ ನಿರ್ಮಿಸಲಾದ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಡಾ.ಕೆ. ಸುಧಾಕರ್, ಮಧುಸೂದನ್ ಸಾಯಿ ಸಂಸ್ಥೆಯ ಆಡಳಿತಾಧಿಕಾರಿಗಳು ಇದ್ದರು.
ವೈದ್ಯಕೀಯ ಕಾಲೇಜು ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ, ಎಲ್ಲರ ಸಹಭಾಗಿತ್ವದಿಂದ ಮಾತ್ರ ದೇಶ ಸಮೃದ್ಧವಾಗಲು ಸಾಧ್ಯ. ಕಡಿಮೆ ಅವಧಿಯಲ್ಲಿ ಭಾರತ ಅಭಿವೃದ್ಧಿ ಹೊಂದಿದ್ದರ ಬಗ್ಗೆ ವಿಶ್ವದ ಇತರೆ ರಾಷ್ಟ್ರಗಳು ಅಚ್ಚರಿಗೊಳಗಾಗಿ ಪ್ರಶ್ನೆ ಮಾಡುತ್ತಿವೆ. ಕೇಂದ್ರ ಸರ್ಕಾರ ಎಲ್ಲರನ್ನೂ ಒಳಗೊಂಡಂತೆ ಅಭಿವೃದ್ಧಿಯನ್ನು ಸಾಧಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.
7 ನೇ ಬಾರಿಗೆ ಕರ್ನಾಟಕಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ರಾಜಕೀಯ ಭಾಷಣವನ್ನ ಮಾಡದೇ, ಸರ್ಕಾರದ ಅಭಿವೃದ್ಧಿಯ ಬಗ್ಗೆ ಮಾತನಾಡಿ, ದೇಶದಲ್ಲಿ ಈಗ 6 ಸಾವಿರಕ್ಕೂ ಅಧಿಕ ವೈದ್ಯಕೀಯ ಕಾಲೇಜುಗಳಿವೆ. ಅದರಲ್ಲಿ 4 ಸಾವಿರಕ್ಕೂ ಅಧಿಕ ಕಾಲೇಜುಗಳನ್ನು ಪ್ರಮುಖ ನಗರಗಳಲ್ಲಿ ಆರಂಭಿಸಲಾಗಿದೆ. ಸರ್ಕಾರ ಡಬಲ್ ಸರ್ಕಾರದಿಂದಾಗಿ 8 ವರ್ಷಗಳಲ್ಲಿ ಇದು ಸಾಕಾರವಾಗಿದೆ. ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಬಜೆಟ್ನಲ್ಲಿ ಘೋಷಿಸಲಾಗಿತ್ತು. ಅದರಂತೆ ಕಾಲೇಜು ಆರಂಭಿಸಲಾಗಿದೆ. ಇಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ಸರ್ಕಾರ ಉದ್ದೇಶವಾಗಿದೆ ಎಂದು ಹೇಳಿದರು.
ಕನ್ನಡ ಭಾಷೆ ಬಗ್ಗೆ ಗುಣಗಾನ:ಪ್ರತಿ ಬಾರಿಯೂ ರಾಜ್ಯಕ್ಕೆ ಬಂದಾಗಲೂ ಪ್ರಧಾನಿ ಮೋದ ಅವರು ಕನ್ನಡದಲ್ಲೇ ಭಾಷಣ ಆರಂಭಿಸುತ್ತಾರೆ. ಈ ಬಾರಿಯೂ ಸಹ ಕನ್ನಡಿಗರ ತಾಯ್ನುಡಿಯಲ್ಲೇ ಮಾತು ಆರಂಭಿಸಿದರು. ಬಳಿಕ ಕನ್ನಡ ಸಮೃದ್ಧ ಭಾಷೆಯಾಗಿದೆ. ದೇಶದ ಗೌರವ ಹೆಚ್ಚಿಸುವ ಭಾಷೆ ಇದು. ಹಿಂದಿನ ಸರ್ಕಾರಗಳು ಈ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ನೀಡಿರಲಿಲ್ಲ. ನಮ್ಮ ಸರ್ಕಾರ ಕನ್ನಡ ಸೇರಿದಂತೆ ವಿವಿಧ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.
ದೇಶದಲ್ಲಿ ಬಡವರಿಗೂ ಅಗ್ಗದ ದರದಲ್ಲಿ ಔಷಧಿ ಸಿಗಬೇಕು ಎಂಬುದು ಸರ್ಕಾರದ ಗುರಿಯಾಗಿದೆ. ದೇಶದಲ್ಲಿ 10 ಸಾವಿರಕ್ಕೂ ಅಧಿಕ ಜನೌಷಧಿ ಅಂಗಡಿಗಳಿವೆ. ಅದರಲ್ಲಿ 1 ಸಾವಿರ ಕರ್ನಾಟಕದಲ್ಲಿವೆ. ಅವುಗಳು ಜಾರಿಯಾದ ಬಳಿಕ ಔಷಧಿಗಳ ವೆಚ್ಚ ತೀರಾ ಕಡಿಮೆಯಾಗಿದೆ. ಜನರು ಸರಾಗವಾಗಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.