ಚಿಕ್ಕಬಳ್ಳಾಪುರ:ಜಿಲ್ಲೆಯ ಚಿಂತಾಮಣಿ ತಾಲೂಕಿನ ಜಿ. ರಾಮಾಪುರ ಎಂಬ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಶಿಥಿಲಾವಸ್ಥೆಯಲ್ಲಿದೆ. ಛಾವಣಿಯಿಂದ ಸಿಮೆಂಟ್ನ ಚೆಕ್ಕೆಗಳು ಉದುರುತ್ತಿವೆ. 1 ರಿಂದ 5 ವರೆಗಿನ ಮಕ್ಕಳು ಒಂದೇ ಕೊಠಡಿಯಲ್ಲಿ ಪಾಠ ಕೇಳುವಂತಾಗಿದೆ. ಶಾಲಾ ಕಟ್ಟಡದ ಪರಿಸ್ಥಿತಿ ಕಂಡು ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಶಾಲೆಗೆ ಮೂಲ ಸೌಕರ್ಯಗಳನ್ನು ಒದಗಿಸಲು ಶಿಕ್ಷಣ ಇಲಾಖೆ ವಿಫಲವಾಗಿದೆ. ಈ ಬಗ್ಗೆ ಬಿಇಒ, ತಾಲೂಕು ಪಂಚಾಯತ್, ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ದೂರು ಕೊಟ್ಟರೂ ಅಧಿಕಾರಿಗಳು ಮಾತ್ರ ಇತ್ತ ಕಡೆ ತಲೆ ಹಾಕಿಲ್ಲ. ವಿದ್ಯಾರ್ಥಿಗಳಿಗೆ ಸರಿಯಾದ ಶೌಚಾಲಯ, ಬಿಸಿಯೂಟದ ವ್ಯವಸ್ಥೆಗೆ ಅಡುಗೆ ಕೋಣೆ ಸಹ ಇಲ್ಲದೇ ಒಂದೇ ರೂಮ್ನಲ್ಲಿ ತರಗತಿ ಅಡುಗೆ ದಿನಸಿ ಇಡಲಾಗಿದೆ. ವಿದ್ಯಾರ್ಥಿಗಳಿಗೆ ಇದರಿಂದ ಉಸಿರು ಗಟ್ಟುವ ಪರಿಸ್ಥಿತಿಯಲ್ಲಿ ಪಾಠ ಕೇಳುವ ಹಾಗಾಗಿದೆ.