ಚಿಕ್ಕಬಳ್ಳಾಪುರ:ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕುಂದಲಗೂರ್ಕಿ ಗ್ರಾಮದ ಗೋಕುಂಟೆ ಕೆಲವು ವಷ೯ಗಳಿಂದ ಸ್ವಚ್ಛತೆ ಇಲ್ಲದೇ ದುರ್ನಾತ ಬೀರುತ್ತಿದೆ.
ಸ್ವಚ್ಛತೆ ಕಾಣದ ಗ್ರಾಮ... ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಗ್ರಾಮಸ್ಥರು
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕುಂದಲಗೂರ್ಕಿ ಗ್ರಾಮ ಸ್ವಚ್ಛತೆ ಇಲ್ಲದೇ ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ.
ಕುಂಟೆ ಸಮೀಪವೇ ವಾಸಿಸುವ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಕುಂಟೆಯ ಸಮೀಪ ಕೆಟ್ಟ ವಾಸನೆ ಹರಡಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಆತಂಕ ಎದುರಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕುಂಟೆಯ ನೈರ್ಮಲ್ಯ ಹದಗೆಟ್ಟಿದ್ದು, ಸುಕ್ತವಾದ ನಿರ್ವಹಣೆ ಇಲ್ಲದೆ ಈ ಕುಂಟೆ ರೋಗಗಳ ತಾಣವಾಗಿದೆ. ಅಷ್ಟೇ ಅಲ್ಲದೆ ಗ್ರಾಮದ ಕೆಲವು ಮನೆಗಳಿಂದ ಕೊಳಚೆ ನೀರನ್ನು ಕುಂಟೆಗೆ ಸೇರುವಂತೆ ಮಾಡಲಾಗಿದೆ. ಅಲ್ಲದೆ ಮಧ್ಯೆ ಪ್ಲಾಸ್ಟಿಕ್ ಬಾಟಲ್ಗಳು, ಪ್ಲಾಸ್ಟಿಕ್ ಗ್ಲಾಸ್ಗಳನ್ನು ಕುಂಟೆಯಲ್ಲಿ ಬಿಸಾಡಲಾಗಿದೆ. ಇದರಿಂದ ಕಸ ಕೊಳೆತು ನಾರುತ್ತಿದ್ದು, ಗಿಡಗಂಟಿಗಳು ಬೆಳೆದು ಸೊಳ್ಳೆಗಳೊಂದಿಗೆ ಹಾವು, ಹುಳ, ಇನ್ನಿತರ ಅಪಾಯಕಾರಿ ಜೀವಿಗಳ ಆಶ್ರಯ ತಾಣವಾಗಿ ಪರಿವರ್ತನೆಗೊಂಡಿದೆ.
ಸ್ವಚ್ಛತೆ ಕಾಪಾಡಬೇಕೆಂದು ಜಾರಿಗೊಳಿಸಿರುವ ಸ್ವಚ್ಛ ಭಾರತ ಅಭಿಯಾನದಿಂದ ಈ ಗ್ರಾಮಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಡೆಂಗ್ಯೂ, ಮಲೇರಿಯಾ ಸೇರಿದಂತೆ ವಿವಿಧ ರೋಗಗಳು ಹರಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದು ಒತ್ತಾಯಿಸಿದ್ದಾರೆ.