ಕರ್ನಾಟಕ

karnataka

ETV Bharat / state

ಕೆರೆ ವಿಕ್ಷಣೆ ವೇಳೆ ಜಿಲ್ಲಾಧಿಕಾರಿಗಳ ಮುಂದೆಯೇ ಪ್ರತಿಭಟನೆಗೆ ಕುಳಿತುಕೊಂಡ ಗ್ರಾಮಸ್ಥರು - people protest in front of DC

ಕೆಲವರು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ನದಿ ನೀರು ಮನೆಗಳಿಗೆ ನುಗ್ಗುತ್ತಿದೆ. ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು..

By

Published : Nov 21, 2021, 4:09 PM IST

ಗೌರಿಬಿದನೂರು(ಚಿಕ್ಕಬಳ್ಳಾಪುರ):ತಾಲೂಕಿನ ಮೇಳ್ಯಾ ಮತ್ತು ಕಲ್ಲೂಡಿ ಗ್ರಾಮಗಳ ಕೆರೆ ಒಡೆದು ಹೋಗಿ ನೀರು ಪೋಲಾಗಿದೆ. ಸ್ಥಳ ಪರಿಶೀಲನೆಗೆ ಬಂದ ಜಿಲ್ಲಾಧಿಕಾರಿಗಳ ಮುಂದೆ ಗ್ರಾಮಸ್ಥರು ಧರಣಿ ನಡೆಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ ಘಟನೆ ಭಾನುವಾರ ನಡೆದಿದೆ.

ಕಳೆದ 1 ವಾರದಿಂದ ಬೀಳುತ್ತಿರುವ ಮಳೆಯಿಂದ ಮೇಳ್ಯಾ ಕೆರೆ ತುಂಬಿದೆ. ಆದರೆ, ಹಳೆಯದಾಗಿದ್ದ ಕೆರೆಯ ಕೆಲವು ತೂಬುಗಳಲ್ಲಿ ನೀರು ಸೋರಿಕೆ ಆಗುತ್ತಿದ್ದನ್ನು ಕಂಡ ಗ್ರಾಮಸ್ಥರು ಸಣ್ಣ ನೀರಾವರಿ ಇಲಾಖೆ ಆಧಿಕಾರಿಗಳಾದ ರೂಪಾ ಮತ್ತು ಶ್ರೀನಿವಾಸ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

ಇದನ್ನು ನಿರ್ಲಕ್ಷಿಸಿದ ಅಧಿಕಾರಿಗಳು ಯಾವುದೇ ಕ್ರಮವಹಿಸದ ಕಾರಣ, ಕೆರೆ ಕಟ್ಟೆ ಒಡೆದು ನೀರು ಪೋಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ರೈತರು ಬೆಳೆ ಬೆಳೆಯಲು ಆಧಾರವಾಗಿದ್ದ ಕೆರೆಯ ನೀರು ಪೋಲಾಗಿದೆ.

ರೈತರು ಹೇಗೆ ಬೆಳೆ ಬೆಳೆಯಬೇಕು. ಅಲ್ಲದೇ, ಈ ಭಾಗದಲ್ಲಿ ಅಂತರ್ಜಲ ವೃದ್ಧಿಗೂ ಕೆರೆಯ ನೀರು ಸಹಕಾರಿಯಾಗಿತ್ತು. ಕೆರೆ ಒಡೆದು ಹೋಗುವ ಮನ್ಸೂಚನೆ ನೀಡಿದ್ದರೂ ಕ್ರಮಕೈಗೊಳ್ಳದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ತಪ್ಪಾಗಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ :ಕೆರೆ ವೀಕ್ಷಣೆ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಕಳೆದ 40 ವರ್ಷಗಳಿಂದ ಮಳೆ ಕೊರತೆ ಇತ್ತು. ಜಿಲ್ಲೆಯಾದ್ಯಂತ ಈಗ ಉತ್ತಮ ಮಳೆಯಾಗಿದೆ. ಕೆಲವೆಡೆ ಅತಿವೃಷ್ಟಿಯಾಗಿ ಬೆಳೆ ಹಾನಿಯೂ ಸಂಭವಿಸಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ರಾಗಿ ಹಾಗೂ 33 ಸಾವಿರ ಹೆಕ್ಟೇರ್​ ಜೋಳದ ಬೆಳೆ ಮಳೆಯಿಂದ ಹಾನಿಯಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ಗೌರಿಬಿದನೂರಿನ ಕೆಲವು ಭಾಗದಲ್ಲಿ ಮನೆಗೆ ನೀರು ನುಗ್ಗಿ ಜನರು ನಿರಾಶ್ರಿತರಾಗಿದ್ದಾರೆ. ಅವರಿಗೆ ನಗರಸಭೆಯಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ನಿರಾಶ್ರಿತರಿಗೆ ಶಾಶ್ವತ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುಲಾಗುವುದು ಎಂದರು.

ರಾಜಕಾಲುವೆ ಒತ್ತುವರಿಯಿಂದ ಮನೆಗೆ ನೀರು :ಕೆಲವರು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ನದಿ ನೀರು ಮನೆಗಳಿಗೆ ನುಗ್ಗುತ್ತಿದೆ. ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ABOUT THE AUTHOR

...view details