ಚಿಕ್ಕಬಳ್ಳಾಪುರ:ಮನೆಯ ಯಜಮಾನ ಮೃತಪಟ್ಟಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ ಮಕ್ಕಳು ಅಪ್ಪನನ್ನ ಆ್ಯಂಬುಲೆನ್ಸ್ ಮೂಲಕ ದೂರದ ಸ್ವಗ್ರಾಮಕ್ಕೆ ಕೊಂಡೊಯ್ಯುತ್ತಿದ್ರು. ಆದ್ರೆ ಆ ಆ್ಯಂಬುಲೆನ್ಸ್ ಅಪಘಾತಕ್ಕೀಡಾಗಿ ಮೃತನ ಸಂಬಂಧಿಕರು ಆಸ್ಪತ್ರೆಪಾಲಾಗಿದ್ದಾರೆ. ಇಂತಹ ಮನಕಲಕುವ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಮೃತದೇಹ ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅಪಘಾತ ಯಾದಗಿರಿ ಮೂಲದ ಮರೆಪ್ಪ ಎಂಬುವರು ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಅವರ ಸಂಬಂಧಿಕರು ಬೆಂಗಳೂರಿನಿಂದ ಆ್ಯಂಬುಲೆನ್ಸ್ ಮೂಲಕ ಸ್ವಗ್ರಾಮಕ್ಕೆ ಮೃತದೇಹವನ್ನು ಕೊಂಡೊಯ್ಯುತ್ತಿದ್ರು. ಚಿಕ್ಕಬಳ್ಳಾಪುರದ ಹುನೇಗಲ್ ಬಳಿ ಹೆದ್ದಾರಿ ಮಧ್ಯೆ ಸಡನ್ ಆಗಿ ಟಿಪ್ಪರ್ ಲಾರಿಯೊಂದು ಅಡ್ಡಬಂದಿದ್ದರಿಂದ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಇದರಿಂದ ವಾಹನದಲ್ಲಿದ್ದ ಮೃತ ವ್ಯಕ್ತಿಯ ಸಂಬಂಧಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆ್ಯಂಬುಲೆನ್ಸ್ನಲ್ಲಿ ಮೃತದೇಹದ ಜೊತೆಗೆ ಮೃತನ ಹೆಂಡತಿ, ಮಕ್ಕಳು, ಸಂಬಂಧಿಕರು ಸೇರಿ 5 ಮಂದಿ ಪ್ರಯಾಣ ಮಾಡ್ತಿದ್ರು. ಇವರಲ್ಲಿ ಒಬ್ಬ ಮಹಿಳೆ ಗಾಯಗೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹುನೇಗಲ್ ಬಳಿ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಮಾಡಲಾಗಿದ್ದು, ಸರ್ವೀಸ್ ರಸ್ತೆ ಇಲ್ಲದೆ ಯೂಟರ್ನ್ ಮಾಡಿರುವುದರಿಂದ ಪದೆ ಪದೇ ಅಪಘಾತಗಳಾಗ್ತಿವೆ ಅಂತ ಸ್ಥಳೀಯರು ದೂರಿದ್ದಾರೆ.
ಒಟ್ಟಿನಲ್ಲಿ ಮನೆ ಯಜಮಾನನ ಸಾವಿನಿಂದಾಗಿ ಸೂತಕದ ಛಾಯೆಯಿಂದ ದುಃಖಿತರಾಗಿದ್ದ ಕುಟುಂಬಸ್ಥರಿಗೆ ಅಪಘಾತ ಮತ್ತಷ್ಟು ಆಘಾತ ತಂದಿದೆ. ಆದರೆ, ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ ಎಂಬುದೇ ನಿಟ್ಟುಸಿರು ಬಿಡುವ ವಿಚಾರ. ಅಪಘಾತದ ನಂತರ ಟಿಪ್ಪರ್ ಚಾಲಕ ಲಾರಿ ಸ್ಥಳದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದು, ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ವಾಹನಗಳನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ:ಪ್ರವೀಣ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, ಮನೆ ನಿರ್ಮಿಸಿ ಕೊಡಲು ಬಿಜೆಪಿ ನಿರ್ಧಾರ