ಗುಡಿಬಂಡೆ (ಚಿಕ್ಕಬಳ್ಳಾಪುರ): ದೇಶದಾದ್ಯಂತ ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಡವರು ಹಾಗೂ ಕೃಷಿ ಕೂಲಿಕಾರರು ಸಂಕಷ್ಟದಲ್ಲಿದ್ದು, ಅವರಿಗೆ ನರೇಗಾ ಯೋಜನೆಯಡಿ 200 ದಿನ ಕೆಲಸ ನೀಡಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯೆ ಸಾವಿತ್ರಮ್ಮ ಆಗ್ರಹಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿಯ ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಕೋವಿಡ್-19 ವೈರಸ್ನಿಂದಾಗಿ ಇಡೀ ವಿಶ್ವವೇ ಸಂಕಷ್ಟಕ್ಕೀಡಾಗಿದೆ. ಮಹಾನಗರಗಳಿಗೆ ಉದ್ಯೋಗ ಅರಿಸಿ ಹೋಗಿದ್ದವರು ಸ್ವ-ಗ್ರಾಮಗಳಿಗೆ ಮರಳುತ್ತಿದ್ದಾರೆ. ಅವರಿಗೆಲ್ಲ ಕೆಲಸ ಒದಗಿಸಬೇಕು ಎಂದು ಹೇಳಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪ್ರತಿಭಟನೆ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಅನೇಕರಿಗೆ ನರೇಗಾ ಯೋಜನೆ ಆಸರೆಯಾಗಿದೆ. ಆದರೆ ಗ್ರಾಮ ಪಂಚಾಯಿತಿಗಳು ಈ ಯೋಜನೆಯಡಿ ಕೆಲಸ ನೀಡಲು ವಿಳಂಬ ಮಾಡುತ್ತಿದ್ದಾರೆ. ನರೇಗಾ ಯೋಜನೆಯಡಿ ದಿನಕ್ಕೆ 600 ರೂ.ಯಂತೆ ಕೂಲಿ ಹಾಗೂ ವರ್ಷದಲ್ಲಿ 200 ದಿನಗ ಉದ್ಯೋಗ ಖಾತ್ರಿ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.
ಎಲ್ಲಾ ಕೂಲಿಕಾರರ ಕುಟುಂಬಗಳಿಗೆ ತಿಂಗಳಿಗೆ 7,500 ರೂ. ಆರ್ಥಿಕ ನೆರವು ನೀಡಬೇಕು. ವಲಸೆ ಕಾರ್ಮಿಕ ಕುಟುಂಬಗಳಿಗೆ ವಿಶೇಷ ಆರ್ಥಿಕ ನೆರವಿನಡಿ ಯಾವುದೇ ರೇಷನ್ ಕಾರ್ಡ್ ಷರತ್ತು ವಿಧಿಸಿದೇ ಮುಂದಿನ 6 ತಿಂಗಳಿಗೆ ತಲಾ 10 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ ವಿತರಣೆ ಮಾಡಬೇಕು. ಶೀಘ್ರವೇ ಜಾಬ್‍ಕಾರ್ಡ್ ವಿತರಿಸಿ ನರೇಗಾ ತಂತ್ರಾಂಶದ ತೊಂದರೆ ಸರಿಪಡಿಸಬೇಕು. ಕಳೆದ ವರ್ಷ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಬಾಕಿ ಬಿಲ್‍ಗಳಿಗೆ ಅನುದಾನ ನೀಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು.