ಚಿಕ್ಕಬಳ್ಳಾಪುರ: ಪಂಚರತ್ನ ರಥಯಾತ್ರೆ ವೇಳೆ ಚಿನ್ನಸಂದ್ರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಗುವಿಗೆ ನಾಮಕರಣ ಮಾಡಿದ್ದಾರೆ. ಚಿನ್ನಸಂದ್ರಕ್ಕೆ ಬಂದಿದ್ದ ದಾಚಾಪುರ ಗ್ರಾಮದ ಸುರೇಶ್ ಮತ್ತು ರೂಪಾ ದಂಪತಿಯು ಮಗುವಿಗೆ ನಾಮಕರಣ ಮಾಡುವಂತೆ ಕೋರಿದ್ದು, ಇದೇ ವೇಳೆ ಮಗುವಿಗೆ ರಿಶಿಕ್ ಎಂದು ಹೆಸರಿಟ್ಟಿದ್ದಾರೆ.
ಶಿಡ್ಲಘಟ್ಟ ಕ್ಷೇತ್ರದ ಹುಣಸೇನಹಳ್ಳಿಯಲ್ಲಿ ಮಾತನಾಡಿದ ಅವರು, ನನ್ನ ಆರೋಗ್ಯವನ್ನೂ ಲೆಕ್ಕಿಸದೆ ಹೋರಾಟ ಮಾಡ್ತಿದ್ದೇನೆ. ರಾಜ್ಯಾದ್ಯಂತ ಪಂಚರತ್ನ ಯೋಜನೆಯನ್ನು ನಾಡಿನ ಜನತೆಗೆ ತಲುಪಿಸಬೇಕು. ಕಳೆದ ಶಿಡ್ಲಘಟ್ಟ ಚುನಾವಣೆಯಲ್ಲಿ ನನ್ನಿಂದ ತಪ್ಪಾಗಿದೆ. ಇದರಿಂದ ಮೇಲೂರು ರವಿ ನೊಂದಿದ್ದಾರೆ. ಕುಟುಂಬದ ಮಗನಾಗಿ ಕೆಲಸ ಮಾಡ್ತಿದ್ದಾರೆ. ಅವರಿಗೆ ನಿಮ್ಮ ಆಶೀರ್ವಾದ ಬೇಕು. ಜೆಡಿಎಸ್ ಸ್ವತಂತ್ರ ಸರ್ಕಾರ ಬರಲು 123 ಕ್ಷೇತ್ರದಲ್ಲಿ ಗೆಲ್ಲಬೇಕಿದೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ರವಿ ಅವರನ್ನು ಗೆಲ್ಲಿಸಿ ನಿಮ್ಮೆಲ್ಲರ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ರಥಯಾತ್ರೆ ಹಿನ್ನೆಲೆ ಹುಣಸೇನಹಳ್ಳಿಯಿಂದ ಶಿಡ್ಲಘಟ್ಟನಗರದವರೆಗೂ ಸಂಪೂರ್ಣ ರಸ್ತೆ ಮಾರ್ಗ ಬಂದ್ ಆಗಿದ್ದು ವಾಹನ ಸವಾರರು ಸಾಕಷ್ಟು ಪರದಾಡುವಂತಾಗಿತ್ತು.
ಪಂಚರತ್ನ ರಥಯಾತ್ರೆಗೆ ಉತ್ತಮ ಪ್ರತಿಕ್ರಿಯೆ.. ಕೋಲಾರದ ಮುಳುಬಾಗಿಲಿನ ಕುರುಡುಮಲೆಯಿಂದ ಪಂಚರತ್ನ ರಥಯಾತ್ರೆ ಆರಂಭವಾಗಿದೆ. ತಾಯಿ ಚಾಮುಂಡಿ ಅನುಗ್ರಹ ಕೂಡ ಇದೆ. ಜನರ ಭಾವನೆ ಏನಿದೆ ಎನ್ನುವುದನ್ನು ಗಮನಿಸುತ್ತಿದ್ದೇನೆ. ಪಂಚರತ್ನ ರಥಯಾತ್ರೆ ಜನರ ಹೃದಯಕ್ಕೆ ಹೋಗ್ತಿದೆ ಎಂದರು.