ಚಿಕ್ಕಬಳ್ಳಾಪುರ : "ಮೋದಿ ಅಭಿವೃದ್ಧಿಯ ಹರಿಕಾರ. ಅವರಂಥ ಪ್ರಧಾನಿ ಪಾಕಿಸ್ತಾನಕ್ಕೆ ಬೇಕು ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಮೋದಿ ಯಾರು ಎಂದು ಕೇಳುತ್ತಿದ್ದಾರೆ. ಪಾಕಿಸ್ತಾನದವರಿಗೆ ಸಿದ್ದರಾಮಯ್ಯ ಯಾರು ಎಂದು ಗೊತ್ತಾ?. ಶಿಡ್ಲಘಟ್ಟ ಜನತೆಗೂ ಗೊತ್ತಿಲ್ಲ" ಎಂದು ಕಂದಾಯ ಸಚಿವ ಆರ್.ಆಶೋಕ್ ವ್ಯಂಗ್ಯವಾಡಿದರು. ಚಿಂತಾಮಣಿಯಲ್ಲಿ ಬಿಜೆಪಿ ಅಭ್ಯರ್ಥಿ ವೇಣುಗೋಪಾಲ್ ನೇತೃತ್ವದಲ್ಲಿ ಕೋಟೆ ಸರ್ಕಲ್ ಬೀದಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
"ಎಸ್ಡಿಪಿಐ ಮತ್ತು ಪಿಎಫ್ಐನವರಿಗೆ ಸಿದ್ದರಾಮಯ್ಯ ಯಾರೆಂದು ಗೊತ್ತು. ಏಕೆಂದರೆ ಪಾಪ್ಯುಲರ್ ಫ್ರಂಟ್ಗೆ ಸಿದ್ದರಾಮಯ್ಯ ನೆಂಟ್ರು. ಅವರ ಅಧಿಕಾರವಧಿಯಲ್ಲಿ 175 ಕೇಸ್ ತೆಗೆದು 1,500 ಜನರನ್ನು ಬಿಡುಗಡೆ ಮಾಡಿದ್ದರು. ಹೀಗೆ ಬಿಡುಗಡೆ ಮಾಡಿದವರು ಇಂದು ಕುಕ್ಕರ್ ಬಾಂಬ್ ಸ್ಪೋಟದಂತಹ ದೇಶವಿರೋಧಿ ಚಟುವಟಿಯಲ್ಲಿ ತೊಡಗಿದ್ದಾರೆ. ಶಾರಿಕ್ ಎಂಬ ಶಂಕಿತ ಉಗ್ರ ಮಂಗಳೂರಿನಲ್ಲಿ ನಡೆಸಿದ ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಸಮರ್ಥನೆ ಮಾಡಿಕೊಂಡ ಡಿ.ಕೆ.ಶಿವಕುಮಾರ್, ಅವರು ಪಾಪದ ಜನರು ಎಂದಿದ್ದರು. ಆದರೆ ಆತ ದೊಡ್ಡ ಉಗ್ರ" ಎಂದು ಹೇಳಿದರು.
ಡಿಕೆಶಿಯನ್ನು ಬಂಡೆ ಎನ್ನುತ್ತಾರೆ. ಮೆಡಿಕಲ್ ಕಾಲೇಜು ಬಂಡೆ ಹತ್ತಿರ ಇತ್ತು. ಬಂಡೆ ಹತ್ತಿರ ಇರುವ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರ ಜಿಲ್ಲೆಗೆ ತಂದಿದ್ದು ಸಚಿವ ಸುಧಾಕರ್. ಜೆಡಿಎಸ್, ಕಾಂಗ್ರೆಸ್ ಕಳ್ಳ ಕೈಗಳು. ಅವರು ಜೊಡೆತ್ತುಗಳಲ್ಲ, ಕುಂಟೆತ್ತುಗಳು. ಅವರ ಕೈಯಲ್ಲಿ ಅಧಿಕಾರ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿಗೆ ಮತ ನೀಡಬೇಕು ಮನವಿ ಮಾಡಿಕೊಂಡರು.