ಚಿಕ್ಕಬಳ್ಳಾಪುರ: ನಾನು ಇತ್ತೀಚೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೊಡಗಿನ ಸುದರ್ಶನ್ ಗೆಸ್ಟ್ ಹೌಸ್ನಲ್ಲಿ ಮಧ್ಯಾಹ್ನ ಊಟ ಮಾಡಿದ್ದೆ. ಬಳಿಕ ಸಂಜೆ ಅಲ್ಲಿನ ಬಸವೇಶ್ವರ ದೇವಾಲಯಕ್ಕೆ ಹೋಗಿದ್ದೇನೆ. ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋದ್ರೆ ತಪ್ಪೇನು? ಮಧ್ಯಾಹ್ನ ತಿಂದು ಸಂಜೆ ದೇವಾಲಯಕ್ಕೆ ಹೋದ್ರೆ ತಪ್ಪೇನು? ನನ್ನ ಊಟದ ಬಗ್ಗೆ ಪ್ರಶ್ನಿಸಲು ನೀವ್ಯಾರು? ಎಂದು ನಗರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿಗರಿಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿಂದು ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕೊಡಗು ಭೇಟಿ ವೇಳೆ ಮಾಂಸದೂಟ ಮಾಡಿ ಬಳಿಕ ದೇವಾಲಯಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು ಎಂಬ ಆರೋಪದ ಬಗ್ಗೆ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಮಧ್ಯಾಹ್ನ ತಿಂದು ಸಂಜೆ ದೇವಾಲಯಕ್ಕೆ ಹೋದ್ರೆ ತಪ್ಪಿದೆಯಾ? ನನ್ನ ಊಟದ ಬಗ್ಗೆ ಪ್ರಶ್ನಿಸಲು ನೀವು ಯಾರು? ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪೇನು? ಒಂದು ದಿನದ ಮುಂಚೆ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋದರೆ ತಪ್ಪಾಗಲ್ವಾ. ಮಾಂಸಾಹಾರಿಗಳು ಮಾಂಸ ತಿಂತಾರೆ, ಸಸ್ಯಾಹಾರಿಗಳು ಸಸ್ಯಾಹಾರ ತಿಂತಾರೆ. ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಬೇಡ ಅಂತ ಕೇಳೋಕೆ ನೀವ್ಯಾರು ಎಂದು ಗರಂ ಆದರು.
ಜನೋತ್ಸವ ಅಲ್ಲ, ಭ್ರಷ್ಟೋತ್ಸವ.. ನಾನು ಕೊಡಗಿಗೆ ದಾಳಿ ಮಾಡಲು ಹೋಗುತ್ತಿಲ್ಲ, ಜನರ ಕಷ್ಟಗಳಿಗ ಸ್ಪಂದಿಸಲು ಹೋಗುತ್ತಿದ್ದೇನೆ. ಆದರೆ ಬಿಜೆಪಿಯವರಿಗೆ ನಮ್ಮ ಏಳಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿಯವರು ತಮ್ಮ ತಪ್ಪುಗಳನ್ನು ಮುಚ್ಚಿಡಲು ಈ ರೀತಿ ಅಪಪ್ರಚಾರಕ್ಕೆ ಮುಂದಾಗುತ್ತಿದ್ದಾರೆ. ಅವರದು ಜನೋತ್ಸವ ಅಲ್ಲ, ಅದು ಭ್ರಷ್ಟೋತ್ಸವ ಎಂದು ಸಿದ್ದರಾಮಯ್ಯ ಟೀಕಿಸಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ: ಕೊಡಗಿನಲ್ಲಿ ಅಶಾಂತಿಯ ವಾತಾವರಣ