ಚಿಕ್ಕಬಳ್ಳಾಪುರ; ಗುಡಿಬಂಡೆ ಪಟ್ಟಣದ ಹೊರವಲಯದ ಅಮಾನಿಬೈರಸಾಗರ ಕೆರೆಯ ಏರಿಯ ಮೇಲೆ ಕಳೆದ ತಿಂಗಳ ಹಿಂದೆಯಷ್ಟೇ ಕೆ.ಎಸ್.ಆರ್.ಟಿ.ಸಿ ವಾಹನ ಅಪಘಾತಗೊಂಡು ಸುಮಾರು 10 ಮೀಟರ್‍ನಷ್ಟು ಕೆರೆ ಕಟ್ಟೆ ಬಿದ್ದು ಹೋಗಿದ್ದು, ಅಪಘಾತಗಳಿಗೆ ಆಹ್ವಾನ ನೀಡುವಂತಿದೆ, ಆದರೂ ಕೂಡ ಇತ್ತ ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಡೆಗೋಡೆ ಬಿದ್ರು ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಕಳೆದ ಜುಲೈ ತಿಂಗಳ 23 ರಂದು ಗುಡಿಬಂಡೆಯಿಂದ ಚಿಕ್ಕಬಳ್ಳಾಪುರಕ್ಕೆ ಹೋಗುತ್ತಿದ್ದ ಬಸ್ ಕೆರೆಯ ಕಟ್ಟೆಗೆ ಡಿಕ್ಕಿ ಹೊಡೆದಿದ್ದು ಸುಮಾರು 10 ಮೀಟರ್‍ನಷ್ಟು ಕೆರೆ ಕಟ್ಟೆ ಹಾಳಾಗಿತ್ತು. ಆದರೆ ಬಸ್ಸಿನಲ್ಲಿದ್ದ ಯಾವೊಬ್ಬ ಪ್ರಯಾಣಿಕರಿಗೂ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ ಅಪಘಾತದ ನಂತರ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೆರೆಯ ಏರಿಯ ಮೇಲಿನ ರಸ್ತೆ ಲೋಕೋಪಯೋಗಿ ಇಲಾಖೆಗೂ, ಕೆರೆಯ ನೀರು ಶೇಖರಣೆಯ ಭಾಗ ಸಣ್ಣ ನೀರಾವರಿ ಇಲಾಖೆಗೂ ಸೇರಿರುತ್ತದೆ. ಆದರೆ ಈ ಎರಡೂ ಇಲಾಖೆಗಳೂ ಕೂಡ ನಮಗೆ ಸಂಬಂಧಿಸಿಲ್ಲ , ನಮಗೆ ಸಂಬಂಧಿಸಿಲ್ಲ ಎಂದು ಕುರುಡು ಜಾಣರಂತೆ ವರ್ತಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಹೆಚ್.ಪಿ.ಲಕ್ಷ್ಮೀನಾರಾಯಣ ಆರೋಪಿಸಿದ್ದಾರೆ.
ಇನ್ನೂ ಇದೇ ರಸ್ತೆಯಲ್ಲಿ ಪ್ರತಿನಿತ್ಯ ತಾಲ್ಲೂಕು ದಂಡಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುವಂತಹ ಎಲ್ಲಾ ಇಲಾಖೆಗಳ ಅಧಿಕಾರಿಗಳೂ ಇದೇ ರಸ್ತೆ ಮೂಲಕ ಚಲಿಸಬೇಕಿದೆ. ಜೊತೆಗೆ ಶಾಸಕರು ಸೇರಿದಂತೆ ಜನಪ್ರತಿನಿಧಿಗಳೂ ಸಂಚರಿಸಬೇಕಿದೆ. ಸದ್ಯ ಇದೇ ತಡೆಗೋಡೆ ಸೇರಿದಂತೆ ರಸ್ತೆಯ ಪಕ್ಕದಲ್ಲಿ ಗಿಡಗಳು ಬೆಳೆದು ನಿಂತಿದ್ದು . ಪ್ರತಿನಿತ್ಯ ಸಂಚರಿಸುವ ವಾಹನಗಳು ಅಪಘಾತಕ್ಕೆ ತುತ್ತಾಗುವ ಸಾಧ್ಯತೆಯಿದೆ. ಈಗಾಲಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.