ಕರ್ನಾಟಕ

karnataka

ETV Bharat / state

ಅನುಮತಿ ಕೊಟ್ಟರೂ ತೆರೆಯಲಿಲ್ಲ ಚಿತ್ರಮಂದಿರಗಳು : ಕಾರಣ ಇಲ್ಲಿವೆ ನೋಡಿ - ಚಿತ್ರಮಂದಿರ ತೆರೆಯಲು ಸರ್ಕಾರ ಅನುಮತಿ

ಸರ್ಕಾರದ ಮಾರ್ಗಸೂಚಿ ಪ್ರಕಾರ ಚಿತ್ರಮಂದಿರಗಳನ್ನು ಶುರು ಮಾಡಿದ್ರೆ ಮಾಲೀಕರ ಮೇಲೆ ಆರ್ಥಿಕ ಹೊಡೆತ ಬೀಳತ್ತೆ ಎಂಬ ಕಾರಣಕ್ಕೆ ಚಿಕ್ಕಬಳ್ಳಾಪುರದ ಸಿನಿ ಮಂದಿರಗಳು ತೆರೆದಿಲ್ಲ.

no theaters open in chikkaballapur
ಅನುಮತಿ ಕೊಟ್ರು ತೆರೆಯಲಿಲ್ಲ ಚಿತ್ರಮಂದಿರಗಳು : ಕಾರಣ ಇಲ್ಲಿವೆ ನೋಡಿ

By

Published : Oct 16, 2020, 7:22 PM IST

ಬಾಗೇಪಲ್ಲಿ : ಕೋವಿಡ್‌-19 ಕಾರಣಕ್ಕೆ ಆರೂವರೆ ತಿಂಗಳಿಂದ ಬಂದ್ ಆಗಿದ್ದ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದರೂ ತಾಲೂಕಿನಲ್ಲಿ ವೆಂಕಟೇಶ್ವರ ಚಿತ್ರಮಂದಿರ ಹಾಗೂ ರಾಘವೇಂದ್ರ ಚಿತ್ರಮಂದಿರದ ಮಾಲೀಕರು ಗುರುವಾರ ಚಿತ್ರ ಪ್ರದರ್ಶನಕ್ಕೆ ಮನಸ್ಸು ಮಾಡಲಿಲ್ಲ.

ರಾಜ್ಯ ಸರ್ಕಾರ ಲಾಕ್‌ಡೌನ್‌ನ ಭಾಗವಾಗಿ ರಾಜ್ಯದೆಲ್ಲೆಡೆ ಚಿತ್ರಮಂದಿರಗಳನ್ನು ಬಂದ್‌ ಮಾಡುವಂತೆ ಆದೇಶಿಸಿತ್ತು. ಈ ಆದೇಶದ ಅನ್ವಯ ತಾಲ್ಲೂಕಿನಲ್ಲಿ ಚಿತ್ರಮಂದಿರಗಳನ್ನು ಬಂದ್‌ ಮಾಡಲಾಗಿತ್ತು. ನಂತರ ಲಾಕ್‌ಡೌನ್‌ ಆದೇಶ ಹಿಂಪಡೆದ ಸರ್ಕಾರ ಚಿತ್ರಮಂದಿರಗಳ ಪುನಾರಂಭಕ್ಕೆ ಹಸಿರು ನಿಶಾನೆ ತೋರಿರಲಿಲ್ಲ. ಇದೀಗ ಗುರುವಾರದಿಂದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಆರಂಭಕ್ಕೆ ಸರ್ಕಾರ ಸಮ್ಮತಿಸಿತ್ತು. ಆದರೆ, ಕೋವಿಡ್‌ ಮಾರ್ಗಸೂಚಿ ಪಾಲನೆಯು ಕಷ್ಟವೆಂಬ ಕಾರಣಕ್ಕೆ ಬಹುತೇಕ ಚಿತ್ರಮಂದಿರಗಳ ಮಾಲೀಕರು ಚಿತ್ರ ಪ್ರದರ್ಶನ ಆರಂಭಿಸಿಲ್ಲ.

ಸರ್ಕಾರದ ಮಾರ್ಗಸೂಚಿ ಪ್ರಕಾರ ಚಿತ್ರಮಂದಿರಗಳಲ್ಲಿ ಡಿಜಿಟಲ್‌ ಟಿಕೆಟ್‌ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಮಾಸ್ಕ್‌ ಧರಿಸಿದ ಪ್ರೇಕ್ಷಕರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಬೇಕು. ಪ್ರತಿಯೊಬ್ಬರನ್ನು ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳಪಡಿಸಬೇಕು. ಪ್ರದರ್ಶನ ಮುಗಿದ ಬಳಿಕ ಕಡ್ಡಾಯವಾಗಿ ಸ್ಯಾನಿಟೈಸ್‌ ಮಾಡಬೇಕು. ಜತೆಗೆ ಆಸನಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು.

ಮಾಲೀಕರಿಗೆ ಆರ್ಥಿಕ ಹೊರೆ :

'ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಲು ಹೊರಟರೆ ಆರ್ಥಿಕ ಹೊರೆ ಹೆಚ್ಚುತ್ತದೆ. ಆಸನಗಳ ನಡುವೆ ಅಂತರ ಕಾಯ್ದುಕೊಂಡರೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಆದಾಯ ಕುಸಿಯುತ್ತದೆ' ಎಂದು ಚಿತ್ರಮಂದಿರಗಳ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಏರು ಗತಿಯಲ್ಲಿ ಸಾಗಿದ್ದು, ಮತ್ತೊಂದೆಡೆ ನಿತ್ಯ ಸೋಂಕಿತರ ಸಾವು ಸಂಭವಿಸುತ್ತಿವೆ. ಕೋವಿಡ್‌ ಭಯದ ಕಾರಣಕ್ಕೆ ಮಾರುಕಟ್ಟೆಗೆ ಬರಲು ಹಿಂಜರಿಯುತ್ತಿರುವ ಜನರು ಚಿತ್ರಮಂದಿರಕ್ಕೆ ಬರುತ್ತಾರೆಯೇ ಎಂಬ ಅನುಮಾನ ಚಿತ್ರಮಂದಿರ ಮಾಲೀಕರಲ್ಲಿದೆ. ಸಿನಿಮಾ ಪ್ರದರ್ಶನಕ್ಕೆ ಹಾಕುವ ಬಂಡವಾಳ ಸಹ ಮರಳುವ ಭರವಸೆ ಇಲ್ಲವಾಗಿದೆ.

ತೆಲುಗು ಭಾಷೆಯ ಪ್ರಭಾವ ಹೆಚ್ಚಿರುವ ಜಿಲ್ಲೆಯಲ್ಲಿ ಕನ್ನಡ ಭಾಷೆಯ ಸಿನಿಮಾಗಳು ಯಶಸ್ವಿ ಪ್ರದರ್ಶನ ಕಾಣುವುದಿಲ್ಲ. ತೆಲುಗು ಚಿತ್ರಗಳನ್ನು ಪ್ರದರ್ಶಿಸಿದರೆ ಮಾತ್ರ ಚಿತ್ರಮಂದಿರಗಳು ಭರ್ತಿಯಾಗುತ್ತವೆ. ಕೆಲವೇ ಸಿನಿಮಾಗಳನ್ನು ನಂಬಿಕೊಂಡು ಚಿತ್ರಮಂದಿರ ತೆರೆಯುವುದು ಹೊರೆಯಾಗುತ್ತದೆ ಎಂದು ಚಿತ್ರಮಂದಿರ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಸುಪ್ರಸಿದ್ಧ ತಾರೆಯರ ದೊಡ್ಡ ಬಜೆಟ್‌ ಸಿನಿಮಾಗಳೇ ಚಿತ್ರಮಂದಿರಗಳ ಜೀವಾಳ. ಇಂತಹ ಸಿನಿಮಾಗಳು ಬಿಡುಗಡೆಯಾದಾಗ ಹಲವು ದಿನಗಳವರೆಗೆ ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಾರೆ. ಆದರೆ, ಈಗ ಅರ್ಧದಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಇರುವುದರಿಂದ ದೊಡ್ಡ ಬಜೆಟ್‌ ಸಿನಿಮಾಗಳು ಬಿಡುಗಡೆ ಆಗುವುದಿಲ್ಲ.

ABOUT THE AUTHOR

...view details