ಚಿಕ್ಕಬಳ್ಳಾಪುರ :ಅಭಿವೃದ್ದಿ ವಿಚಾರದಲ್ಲಿ ನಾವು ರಾಜಕೀಯ ಮಾಡಲ್ಲ ಎಂದು ಹಾಲಿ ಹಾಗೂ ಮಾಜಿ ಸಚಿವರಿಬ್ಬರೂ ವೇದಿಕೆಯಲ್ಲೇ ಟಾಂಗ್ ಕೊಟ್ಟುಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಗೌರಿಬಿದನೂರು ಗಡಿ ಭಾಗಕ್ಕೆ ಹೊಂದಿಕೊಂಡಿರುವುದರಿಂದ ತಾಲೂಕಿನ ಅಭಿವೃದ್ಧಿ ಅತ್ಯಗತ್ಯವಾಗಿದೆ. ನಗರಸಭೆಗೆ ಬೇಕಾದ ಮೂಲಸೌಕರ್ಯ ಕೊಡಲು ಸರ್ಕಾರ ಸಿದ್ಧವಾಗಿದೆ. ಅದೇ ರೀತಿ ಬಿಜೆಪಿ ಸರ್ಕಾರ ಅಭಿವೃದ್ಧಿಗೆ ರಾಜಕೀಯ ಬೆಳೆಸಲು ಹೋಗಲ್ಲ, ಅಡೆತಡೆ ಇಲ್ಲದೆ ಅಭಿವೃದ್ಧಿ ಆಗಬೇಕೆಂದು ತಿಳಿಸಿದರು. ಗೌರಿಬಿದನೂರು ತಾಲೂಕಿನಲ್ಲಿ ಅನೇಕ ರಸ್ತೆಗಳು ಹದಗೆಕೆಟ್ಟಿವೆ. ಕ್ಷೇತ್ರ ಅಭಿವೃದ್ಧಿಯಿಂದ ಹಿಂದುಳಿದಿದೆ. ಸರ್ಕಾರದಿಂದ ಬಂದ ಹಣ ತಾಲೂಕಿನ ಅಭಿವೃದ್ದಿಗೆ ಸಾಕಾಗುವುದಿಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು.
ಕಾರ್ಯಕ್ರಮಕ್ಕೆ ನೂರಾರು ಜನ ಬಂದಿದ್ದು, ಯಾರೂ ಸಹ ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ. ಕೊರೊನಾ ವೈರಾಣು ಹಾಲಿ-ಮಾಜಿ ಮುಖ್ಯಮಂತ್ರಿಗಳನ್ನೂ ಬಿಟ್ಟಿಲ್ಲ. ನಾವು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಎಚ್ಚರಿಕೆ ನೀಡಿದರು. ಕೊರೊನಾ ಬಂದ ಕೂಡಲೇ ವ್ಯಕ್ತಿ ಸಾವನ್ನಪ್ಪುವುದಿಲ್ಲ. ಶೇ.98ರಷ್ಟು ಜನ ಗುಣಮುಖ ಆಗ್ತಿದಾರೆ. ಶೇ. 2ರಷ್ಟು ಮಾತ್ರ ಸಾವನ್ನಪ್ಪುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಎತ್ತಿನ ಹೊಳೆ ಯೋಜನೆಗೆ ಮತ್ತಷ್ಟು ಅನುದಾನ ಸಿಗಲಿದೆ. ಹಿಂದೂಪುರ, ಲೇಪಾಕ್ಷಿವರೆಗೆ ಬಂದಿರುವ ಕೃಷ್ಣ ನದಿ ನೀರಲ್ಲಿ 5-10 ಟಿಎಂಸಿ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸಲಿದ್ದೇವೆ ಎಂದರು.
ಇದೇ ವೇಳೆ ಮಾತಾನಾಡಿದ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎನ್ ಹೆಚ್ ಶಿವಶಂಕರ್ ರೆಡ್ಡಿ, ಸಿದ್ದರಾಮಯ್ಯನವರ ಆಡಳಿತದಲ್ಲಿ ಸಾಕಷ್ಟು ಅಭಿವೃದ್ದಿ‘ ನಡೆದಿದೆ. ಆದರೆ, ಈಗ ಅದೇ ಅಭಿವೃದ್ಧಿ ಕಣ್ಮರೆಯಾಗಿದೆ ಎಂದು ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಪುರಸಭೆಯಿಂದ ನಗರಸಭೆ ಆಯ್ತು. ಸಿದ್ದರಾಮಯ್ಯ ಕಾಲದಲ್ಲಿ ಗೌರಿಬಿದನೂರಿಗೆ ಸುವರ್ಣ ಯುಗವಾಗಿದೆ. ಅವರ ಸಮಯದಲ್ಲಿ ಅಪಾರ ಕೊಡುಗೆಗಳು ದೊರೆತಿವೆ. ಹಿಂದಿನ ಅನುದಾನದಿಂದ ಇವತ್ತು ಅಡಿಗಲ್ಲು ಇಡಲಾಗಿದೆ ಎಂದರು.
8 ತಿಂಗಳಿಂದ ನಗರಸಭೆ ಸದಸ್ಯರು ಅಧಿಕಾರಕ್ಕೆ ಬರಬೇಕು, ರಿಸರ್ವೇಷನ್‌ನಿಂದ ಸಮಸ್ಯೆ ಇದೆ ಎಂದು ಸಚಿವರ ಬಳಿ ಮನವಿ ಮಾಡಿಕೊಂಡರು. ಇನ್ನೂ ತಾಲೂಕಿನ ಅಭಿವೃದ್ಧಿ ಬಗ್ಗೆ ಸದಾನಂದಗೌಡ, ಜಗದೀಶ್ ಶೆಟ್ಟರ್ ಗಮನ ಕೊಟ್ಟರು. ಆದರೆ, ಪೂರ್ಣ ಪ್ರಮಾಣದ ಅನುದಾನ ಕೊಟ್ಟಿದ್ದು ಸಿದ್ದರಾಮಯ್ಯ ಎಂದು ಶಾಸಕರು, ಸಚಿವರಿಗೆ ತಿರುಗೇಟು ನೀಡುವ ರೀತಿ ಮಾತನಾಡಿದರು.
ಇದೇ ವೇಳೆ ತಾಲೂಕಿನ ಬೈರಗೊಂಡನಹಳ್ಳಿ ಜಲಾಶಯ ನಿರ್ಮಾಣ ಆಗಬೇಕಿದೆ. ಜಮೀನು ಪರಿಹಾರದ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಸಚಿವರ ಗಮನಕ್ಕೆ ತಂದರು. ಅಭಿವೃದ್ಧಿ ನಮ್ಮ ಆಶಯ. ಅದರಲ್ಲಿ ನಾವು ರಾಜಕೀಯ ಮಾಡಲ್ಲ. ತಕ್ಕ ಸಮಯದಲ್ಲಿ ಜನರು ಸೂಕ್ತ ಉತ್ತರ ಕೊಡ್ತಾರೆ.
ಸಚಿವ ಜಗದೀಶ್ ಶೆಟ್ಟರ್ ನಿನ್ನೆ ಕರೆ ಮಾಡಿದ್ರು, 2ನೇ ಹಂತದ ಕೈಗಾರಿಕಾ ಪ್ರದೇಶಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದೇ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿಂದಿನ ಯೋಜನೆ, ಕೆಲಸಗಳನ್ನ ಮುಂದುವರೆಸಬೇಕೆಂದು ವೇದಿಕೆಯಲ್ಲೇ ಸಚಿವ ಡಾ.ಕೆ ಸುಧಾಕರ್ ಅವರಿಗೆ ನೇರ ಟಾಂಗ್ ನೀಡಿದ್ದಾರೆ.