ಚಿಕ್ಕಬಳ್ಳಾಪುರ: ಕೋವಿಡ್-19 ಮೂರನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಘೋಷಿಸಿದ್ದರಿಂದ ನಂದಿ ಬೆಟ್ಟದ ಬಳಿ ಇರುವ ವ್ಯಾಪಾರಿಗಳ ಬದುಕು ಅಡಕತ್ತರಿಗೆ ಸಿಲುಕಿದಂತಾಗಿದೆ.
ಹೌದು, ಕೊರೊನಾದಿಂದಾಗಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಕೂಡ ಜಾರಿ ಮಾಡಲಾಗಿತ್ತು. ಸಣ್ಣಪುಟ್ಟ ವ್ಯಾಪಾರಸ್ಥರು, ಉದ್ಯಮಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ತೆಗೆದು ಹಾಕಿದೆ. ರಾಜ್ಯದಲ್ಲಿ ಎಲ್ಲದಕ್ಕೂ ರಿಲೀಫ್ ಸಿಕ್ಕಿದೆ. ಆದ್ರೆ ವಿಶ್ವ ವಿಖ್ಯಾತ ನಂದಿ ಬೆಟ್ಟಕ್ಕೆ ಮಾತ್ರ ಬಿಡುಗಡೆ ಭಾಗ್ಯ ಸಿಗುತ್ತಿಲ್ಲ. ಇದರಿಂದಾಗಿ ಸಣ್ಣಪುಟ್ಟ ವ್ಯಾಪಾರಸ್ಥರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬಿದ್ದಂತಾಗಿದೆ.
ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಳ್ಳುವ ಚಿಕ್ಕಬಳ್ಳಾಪುರದ ತಪ್ಪಲ್ಲಿನಲ್ಲಿರುವ ಪ್ರಸಿದ್ಧ ನಂದಿ ಬೆಟ್ಟಕ್ಕೆ ಪ್ರವಾಸಿಗರು ಬಂದು ನಿರಾಸೆಯಿಂದ ವಾಪಸಾಗುತ್ತಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಸ್ಥರು ಜಿಲ್ಲಾಧಿಕಾರಿಗಳ ಬಳಿ ಹೋಗಿ ನಂದಿ ಬೆಟ್ಟ ಓಪನ್ ಮಾಡಿ, ಇಲ್ಲ ಅಂದ್ರೆ ಸ್ವಲ್ಪ ವಿಷ ಕೊಡಿ ಅಂತಾ ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಸಿ, ಇನ್ನೆರಡು ವಾರದಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದಿದ್ದಾರೆ.