ಚಿಕ್ಕಬಳ್ಳಾಪುರ: ವಾರಾಂತ್ಯದ ದಿನಗಳಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ನಂದಿ ಬೆಟ್ಟಕ್ಕೆ ಪ್ರವೇಶಕ್ಕೆ ಇನ್ಮುಂದೆ ಮುಕ್ತಗೊಳಿಸಲಾಗಿದೆ. ಆನ್ ಲೈನ್, ಆಫ್ ಲೈನ್ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ. ವಿಶ್ವವಿಖ್ಯಾತ ಪ್ರವಾಸಿತಾಣವಾದ ನಂದಿಬೆಟ್ಟಕ್ಕೆ ಕೋವಿಡ್ ಸಾಂಕ್ರಾಮಿಕ ಕಾಯಿಲೆಯಿಂದ ಈವರೆಗೆ ವಾರಾಂತ್ಯದ ದಿನಗಳಲ್ಲಿ ಕೊಠಡಿ ಕಾಯ್ದಿರಿಸಿದ ಪ್ರವಾಸಿಗರನ್ನು ಹೊರತುಪಡಿಸಿ ಉಳಿದ ಪ್ರವಾಸಿಗರಿಗೆ ನಂದಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು. ಈ ನಿರ್ಬಂಧವನ್ನು ಬರುವ ವಾರಾಂತ್ಯದ ದಿನಗಳಿಗೆ ಸಡಿಲಿಕೆ ಮಾಡಿ ಇಂದಿನಿಂದ ಪ್ರವಾಸಿಗರಿಗೆ ಅನುಮತಿ ನೀಡಲಾಗಿದೆ.
ಟಿಕೆಟ್ ಬುಕ್ಕಿಂಗ್ ಹೇಗೆ?: ಒಂದು ದಿನ ಮುಂಚಿತವಾಗಿ ಸಂಜೆ 6:00ಗಂಟೆ ಒಳಗೆ ಟಿಕೇಟ್ನ್ನು ಆನ್ಲೈನ್ನಲ್ಲಿ ಕಾಯ್ದಿರಿಸಬಹುದಾಗಿದೆ. ಆಫ್ ಲೈನ್ ಟಿಕೆಟ್ ಪಡೆಯುವವರು ನಂದಿಬೆಟ್ಟದ ಕೆಳಗಿನ ಪ್ರವೇಶ ದ್ವಾರದ ಬಳಿ ಸಕ್ಷಮ ಪ್ರಾಧಿಕಾರ ತೆರದಿರುವ ಜಿಲ್ಲಾಡಳಿತದ ಕೌಂಟರ್ನಲ್ಲಿ ಪಡೆಯಬಹುದು. ಆನ್ಲೈನ್ ಬುಕ್ಕಿಂಗ್ ಮಾಡುವವರು https://booking.kstdc.co/cre/index.php?id_category=114&controller=category& ವಿಳಾಸವನ್ನು ಸಂಪರ್ಕಿಸಬಹುದು.