ನವದೆಹಲಿ/ಬೆಂಗಳೂರು:ಇನ್ಮುಂದೆ ಕಲ್ಲುಕ್ವಾರಿ ಹಾಗೂ ಗಣಿಗಾರಿಕೆ ಪ್ರದೇಶಗಳಲ್ಲಿ ಸ್ಫೋಟಕ ವಸ್ತುಗಳನ್ನು ಬಳಸಲು ಸರ್ಕಾರದಿಂದ ಅನುಮತಿ ಪಡೆದವರು ಮಾತ್ರ ಬಳಸಲು ಹೊಸ ಕಾನೂನು ಜಾರಿ ಮಾಡುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಗುಂಡಿಬಂಡೆ ತಾಲೂಕಿನ ಹಿರೇನಾಗವೇಲಿಯಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟಿಸಿ ಆರು ಮಂದಿ ಸಾವನ್ನಪ್ಪಿರುವ ಘಟನೆಗೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಆಘಾತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರು ಕಾನೂನು ಬಾಹಿರವಾಗಿ ಕಲ್ಲು ಕ್ವಾರಿ ಮತ್ತು ಗಣಿ ಪ್ರದೇಶಗಳಲ್ಲಿ ಸ್ಫೋಟಕ ವಸ್ತುಗಳನ್ನು ಬಳಕೆ ಮಾಡುತ್ತಿರುವುದರಿಂದಲೇ ಇಂಥ ಘಟನೆಗಳಿಗೆ ಕಾರಣವಾಗುತ್ತಿದೆ. ಇದನ್ನು ತಡೆಯಲು ಸರ್ಕಾರದಿಂದ ಲೈಸೆನ್ಸ್ ಪಡೆದವರು ಮಾತ್ರ ಸ್ಫೋಟಕ ವಸ್ತುಗಳನ್ನು ಬಳಸುವ ಕಾನೂನು ಜಾರಿ ಮಾಡುವುದಾಗಿ ತಿಳಿಸಿದರು.
ಈ ಘಟನೆಗಳು ನುರಿತ ಕೆಲಸಗಾರರಿಗೆ ತರಬೇತಿ ಮತ್ತು ಗಣಿಗಾರಿಕೆ ಶಾಲೆಯ ಸ್ಥಾಪನೆಯ ಮಹತ್ವವನ್ನು ನಮಗೆ ನೆನಪಿಸುತ್ತವೆ. ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ಗಣಿಗಾರಿಕೆ ಸ್ಥಳಗಳಲ್ಲಿ ಜಿಲೆಟಿನ್ ಕಡ್ಡಿಗಳು ಸ್ಫೋಟಕಗಳು ಮತ್ತು ಇತರ ಸ್ಫೋಟಕ ವಸ್ತುಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವ ಬಗ್ಗೆ ತರಬೇತಿ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಗಣಿಗಾರಿಕೆ ಶಾಲೆಯನ್ನು ಸ್ಥಾಪಿಸಲು ತೀರ್ಮಾನಿಸಿದ್ದೇವೆ. ಜೊತೆಗೆ ಗಣಿಗಾರಿಕೆ ಪ್ರದೇಶಗಳಲ್ಲಿನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ಮತ್ತು ಅಕ್ರಮಗಳಲ್ಲಿ ಭಾಗಿಯಾಗಿರುವ ಯಾರಾದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೆಲವು ಕಡೆ ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಒಂದು ವೇಳೆ ನಮ್ಮ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು. ಘಟನೆಗೆ ಕಾರಣರಾದವರು ಯಾರೇ ಪ್ರಭಾವಿಗಳಾಗಿದ್ದರೂ ಎಷ್ಟೇ ದೊಡ್ಡವರಾಗಿದ್ದರೂ ಸುಮ್ಮನೆ ಬಿಡುವುದಿಲ್ಲ. ಕಾನೂನಿನ ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನೇ ಸರ್ಕಾರ ಮಾಡಲಿದೆ ಎಂದರು.