ಚಿಕ್ಕಬಳ್ಳಾಪುರ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬೊಮ್ಮಾಯಿ ಅವರ ತಂಡ ಕೋಲಾರ ಜಿಲ್ಲೆಯ ಕುರುಡುಮಲೆ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ ಎಂದು ಕೋಲಾರ ಲೋಕಸಭೆ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಸೆಪ್ಟೆಂಬರ್ 17 ರಂದು ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಮುಳಬಾಗಿಲು ತಾಲೂಕಿನ ಕುರುಡುಮಲೆ ಶ್ರೀ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ತಾಲೂಕು ಮುಖಂಡರ ಮತ್ತು ಕಾರ್ಯಕರ್ತರ ಜೊತೆ ನಗರದ ಡೆಕ್ಕನ್ ಆಸ್ಪತ್ರೆ ಸಮೀಪವಿರುವ ಬಿಜೆಪಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿ ಚರ್ಚೆ ನಡೆಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಎಸ್.ಮುನಿಸ್ವಾಮಿ, ರೈತ ಹಾಗೂ ಬಡ ವಿರೋಧಿ ಕಾಂಗ್ರೆಸ್ ಸರ್ಕಾರ ಅಲಿ ಬಾಬಾ ಚಾಲೀಸ್ ಚೋರ್ ಎಂಬ ತಂಡ ಮಾಡಿಕೊಂಡು ಹಿಂದುತ್ವದ ಮೇಲೆ ಸನಾತನ ಧರ್ಮದ ವಿರುದ್ಧವಾಗಿ ವೋಟ್ ಬ್ಯಾಂಕಿಗೋಸ್ಕರ ಮಾತನಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಕಾರ್ಯಕರ್ತರು ಯಾವ ರೀತಿ ಕೆಲಸ ಮಾಡಬೇಕು, ಕರ್ನಾಟಕ ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳು ಗೆಲ್ಲಿಸುವುದರ ಮೂಲಕ ಬಿಜೆಪಿ ಪಕ್ಷದ ಶಕ್ತಿ ಏನು ಎಂದು ತೋರಿಸಬೇಕೆಂದು ಕರೆ ನೀಡಿದರು.