ಚಿಂತಾಮಣಿ (ಚಿಕ್ಕಬಳ್ಳಾಪುರ): ವಿಧವಾ, ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ಯೋಜನೆಯಡಿ ಮಾಸಿಕ ಪಿಂಚಣಿ ಅರ್ಹ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ನಿತ್ಯ ಅರ್ಹರು ತಾಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಸಾರ್ವಜನಿಕರು ಲಿಖಿತ ಪತ್ರದ ಮೂಲಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಹೆಚ್.ವಿ. ಶಿವಶಂಕರ್ ಅವರಿಗೆ ದೂರು ಸಲ್ಲಿಸಿದರು.
ಸಮಯಕ್ಕೆ ಸರಿಯಾಗಿ ಸಿಗದ ಮಾಸಿಕ ಪಿಂಚಣಿ: ರಾಜ್ಯ ಆಹಾರ ಆಯೋಗದ ಅಧ್ಯಕ್ಷರಿಗೆ ದೂರು
ಮಾಸಿಕ ಪಿಂಚಣಿ ಅರ್ಹ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ನಿತ್ಯ ಅರ್ಹರು ತಾಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಸಾರ್ವಜನಿಕರು ಲಿಖಿತ ಪತ್ರದ ಮೂಲಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಹೆಚ್.ವಿ.ಶಿವಶಂಕರ್ ಅವರಿಗೆ ದೂರು ಸಲ್ಲಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಆಹಾರ ಅದಾಲತ್‌ನಲ್ಲಿ ಸಾರ್ವಜನಿಕರಿಂದ ಹೆಚ್.ವಿ. ಶಿವಶಂಕರ್ ಅಹವಾಲು ಸ್ವೀಕರಿಸಿದರು. ನಂತರ ಮಾತನಾಡಿದ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಅವರು, ಸರ್ಕಾರಿ ಕೆಲಸಗಳ ನಿಮಿತ್ತ ಕಚೇರಿಗಳಿಗೆ ಬರುವ ಸಾರ್ವಜನಿಕರ ಕೆಲಸ ತ್ವರಿತವಾಗಿ ಮಾಡಿಕೊಡಬೇಕು. ತಾಲೂಕಿನಲ್ಲಿ ಹದಿನೈದು ಸಾವಿರಕ್ಕಿಂತ ಹೆಚ್ಚು ಮಂದಿಗೆ ಕಳೆದ ಎಂಟು ತಿಂಗಳಿನಿಂದ ಪಿಂಚಣಿ ಸಿಗುತ್ತಿಲ್ಲ. ಅವರು ನಿತ್ಯ ತಾಲೂಕು ಕಚೇರಿಗೆ ಅಲೆದಾಡುತ್ತಿದ್ದಾರೆ. ಅವರ ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ನಂತರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ ಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಆಹಾರ ಆಯೋಗದ ಸದಸ್ಯರಾದ ಬಿ ಎ ಮೊಹಮ್ಮದ್ ಅಲಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ಸುಮಿತ್ರಾ, ತಹಶೀಲ್ದಾರ್ ಡಿ. ಹನುಮಂತರಾಯಪ್ಪ ಸೇರಿದಂತೆ ಆಹಾರ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.