ಬಾಗೇಪಲ್ಲಿ: ಪಟ್ಟಣದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೇಲೆ ಬಾಗೇಪಲ್ಲಿ ತಾಲೂಕು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮತ್ತು ತಹಶೀಲ್ದಾರ್ ಡಿ.ಎ. ದಿವಾಕರ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸರ್ಕಾರದಿಂದ ಬಡವರಿಗೆ ದಕ್ಕಬೇಕಾದ ಅಕ್ಕಿ-ರಾಗಿ-ಗೋಧಿ ಅನ್ಯರ ಪಾಲಾಗುತ್ತಿರುವುದು ಜಂಟಿ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.
ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೇಲೆ ದಾಳಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಬಡವರಿಗೆ ವಿತರಿಸಬೇಕಾದ ಅನ್ನಭಾಗ್ಯದ ರಾಗಿ, ಅಕ್ಕಿ ಮತ್ತು ಗೋದಿ ಖರೀದಿ ಹಾಗೂ ವಿತರಣೆಯಲ್ಲಿ ವ್ಯಾಪಕ ಗೋಲ್ ಮಾಲ್ ನಡೆದಿದೆ ಎಂಬ ಅನುಮಾನದ ಹಿನ್ನೆಲೆ ದಾಳಿ ನಡೆಸಿದ್ದೇವೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಬಾಗೇಪಲ್ಲಿ ಶಾಸಕರು ಮಾತನಾಡಿ 3500 ಕ್ವಿಂಟಲ್ ರಾಗಿ ಖರೀದಿಸದೇ ಮಧ್ಯವರ್ತಿಗೆ ಹಣ ಸಂದಾಯವಾಗಿದೆ. ಈ ಪ್ರಕರಣದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ನಾಲ್ಕು ದಿನಗಳ ಹಿಂದೆ ಮಾಹಿತಿ ತಿಳಿದಿದ್ದು, 600 ಕ್ವಿಂಟಲ್ ಅಕ್ಕಿ, 150 ಕ್ವಿಂಟಲ್ ಗೋಧಿ ವಿತರಿಸದೆ ಗೋಲ್ ಮಾಲ್ ಎಸಗಿರುವುದು ಭೇಟಿ ವೇಳೆಯಲ್ಲಿ ಪತ್ತೆಯಾಗಿದೆ ಎಂದರು.
ಬಾಗೇಪಲ್ಲಿ ತಾಲೂಕಿನಾದ್ಯಂತ ಸುಮಾರು 105 ಪಡಿತರ ಅಂಗಡಿಗಳು ಇದ್ದು, ರಾಗಿ ಪ್ರತಿ ಅಂಗಡಿಗಳಿಗೆ ಎರಡು ಕ್ವಿಂಟಲ್ ಕಡಿಮೆ ಕೊಟ್ಟಿದ್ದು ಈ ವಿಷಯ ಶಾಸಕರಿಗೆ ನಾಲ್ಕು ದಿನಗಳ ಹಿಂದೆ ಗಮನಕ್ಕೆ ಬಂದಿದೆ. ನಾಗರಿಕ ಸರಬರಾಜು ನಿಗಮದ ಮೇಲೆ ಅನುಮಾನದ ಹಿನ್ನೆಲೆ ಈ ದಾಳಿ ನಡೆದಿದೆ. ಸುಮಾರು ಎರಡು ಕೋಟಿ ರೂಪಾಯಿ ಗೋಲ್ ಮಾಲ್ ಆಗಿರುವ ಬಗ್ಗೆ ಅನುಮಾನವಿದ್ದು, ಕೂಲಂಕಷವಾಗಿ ಪರಿಶೀಲಿಸಿದಾಗ ಸತ್ಯಾಸತ್ಯತೆ ಹೊರಬರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಾಗೇಪಲ್ಲಿ ತಾಲೂಕು ತಹಶೀಲ್ದಾರ್ ಡಿ.ಎ. ದಿವಾಕರ್, ಕೆಡಿಪಿ ಸದಸ್ಯ ಅಮರನಾಥ ರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನರಸಿಂಹಪ್ಪ ಇನ್ನೂ ಮುಂತಾದವರು ಇದ್ದರು.