ಚಿಕ್ಕಬಳ್ಳಾಪುರ: ಭವಿಷ್ಯದ ರಾಜಕೀಯದಲ್ಲಿ ಸಚಿವ ಎಂ.ಸಿ. ಸುಧಾಕರ್, ಕೃಷ್ಣ ಭೈರೇಗೌಡ ಹಾಗೂ ಮಾಜಿ ಸಚಿವ ಶಿವಶಂಕರ್ ರೆಡ್ಡಿ ಪೈಕಿ ಒಬ್ಬರು ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ಇದು ನನ್ನ ಬಯಕೆ ಕೂಡ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಇಂದು ವಿವಿಧ ಕಾರ್ಯಕ್ರಮಗಳ ನಿಮಿತ್ತ ಕ್ಷೇತ್ರದಲ್ಲಿ ಪರ್ಯಟನೆ ನಡೆಸಿ, ಉಸ್ತುವಾರಿ ಸಚಿವರ ಆಯ್ಕೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸಚಿವ ಎಂ.ಸಿ. ಸುಧಾಕರ್ ಉಸ್ತುವಾರಿ ಸಚಿವರಾಗಿ ಆಯ್ಕೆಯಾಗಲಿದ್ದಾರೆ. ನನಗೆ ಇರುವ ಮಾಹಿತಿ ಪ್ರಕಾರ ಎಂ.ಸಿ. ಸುಧಾಕರ್ ಜಿಲ್ಲಾ ಉಸ್ತುವಾರಿಯಾಗಲಿದ್ದಾರೆ. ಅವರು ಜಿಲ್ಲಾ ಉಸ್ತುವಾರಿ ಆದರೆ ಒಳ್ಳೆಯದು. ಇಷ್ಟು ದಿನ ಚಿಂತಾಮಣಿ ಟೈಗರ್ ಆಗಿದ್ರು, ಈಗ ಇಡೀ ಕರ್ನಾಟಕಕ್ಕೆ ಟೈಗರ್ ಆಗ್ತಾ ಇದ್ದಾರೆ. ಸಚಿವ ಸುಧಾಕರ್ ಅಂತಹ ಜಂಟಲ್‌ಮ್ಯಾನ್ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೋಲಾರ ಜಿಲ್ಲೆಗೆ ಕೃಷ್ಣ ಭೈರೇಗೌಡರು ಉಸ್ತುವಾರಿಗಳಾಗಲಿದ್ದಾರೆ ಎಂದು ಹೇಳಲಾಗಿದೆ. ಇಂದು ನಾನು ಶಾಸಕನಾಗಿದ್ದೇನೆ ಎಂದರೆ ಅದಕ್ಕೆ ಕಾರಣ ಎಂ.ಸಿ. ಸುಧಾಕರ್, ಕೃಷ್ಣ ಭೈರೇಗೌಡ, ಮಾಜಿ ಸಚಿವ ಶಿವಶಂಕರ್ ರೆಡ್ಡಿ ಅವರು. ನನ್ನನ್ನು ಶಾಸಕನನ್ನಾಗಿ ಮಾಡಲು ಹೈಕಮಾಂಡ್‌ಗೆ ಎಷ್ಟು ಒತ್ತಾಯ ಮಾಡಿದ್ರು ಎಂಬುದು ನನಗೆ ಗೊತ್ತು. ಅವರ ಆಶೀರ್ವಾದದಿಂದ ನಾನು ಇಂದು ಶಾಸಕನಾಗಿದ್ದೇನೆ. ಅವರು ಗೆದ್ದರೆ ನಾನು ಗೆದ್ದಂತೆ. ನಾನು ಅವರನ್ನು ಇನ್ನೂ ಉನ್ನತ ಸ್ಥಾನದಲ್ಲಿ ನೋಡಬೇಕು. ನನಗೆ ಒಂದು ಆಸೆ ಇದೆ. ಮುಂದೊಂದು ದಿನ ಎಂ.ಸಿ. ಸುಧಾಕರ್, ಕೃಷ್ಣ ಭೈರೇಗೌಡ, ಶಿವಶಂಕರ್ ರೆಡ್ಡಿ ಮೂವರಲ್ಲಿ ಒಬ್ಬರು ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.