ಚಿಂತಾಮಣಿ (ಚಿಕ್ಕಬಳ್ಳಾಪುರ):ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಸಮರ್ಪಕ ಮಾಹಿತಿ ಒದಗಿಸದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಕೆಲ ಅಧಿಕಾರಿಗಳು ನಿದ್ದೆಗೆ ಜಾರಿದರೆ, ಮತ್ತೆ ಕೆಲ ಅಧಿಕಾರಿಗಳು ಮೊಬೈಲ್ ಹಾಗೂ ವಾಟ್ಸ್ಆ್ಯಪ್ ಚಾಟ್ನಲ್ಲಿ ಮುಳುಗಿದ್ದರು. ಅಂತಹವರಿಗೂ ಕೃಷ್ಣಾರೆಡ್ಡಿ ಚಳಿ ಬಿಡಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಶಾಸಕರು, ಅಂಬೇಡ್ಕರ್ ಭವನಗಳ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಹಾಗೂ ಇನ್ನೂ ಹಲವು ಕಾಮಗಾರಿಗಳು ಪ್ರಾರಂಭ ಮಾಡದಿರುವುದಕ್ಕೆ ಜಿಲ್ಲಾ ಪಂಚಾಯತ್ ಪ್ರಭಾರ ಅಭಿಯಂತರ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಅದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಸಭೆಗೆ ತಡವಾಗಿ ಬಂದ ಕೃಷಿ ಇಲಾಖೆಯ ಕೃಷಿ ಉಪನಿರ್ದೇಶಕಿ ರೂಪಾ ವಿರುದ್ದ ಶಾಸಕ ಕೃಷ್ಣಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು. ಮುಂಗಾರು ಆರಂಭವಾಗಿರುವುದರಿಂದ ಸಮರ್ಪಕವಾಗಿ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಬೇಕು. ಸಾವಯವ ಗೊಬ್ಬರಗಳನ್ನು ಹೆಚ್ಚಾಗಿ ನೀಡಬೇಕು. ಗೊಬ್ಬರ ಅಂಗಡಿಗಳಲ್ಲಿ ದರದ ಪಟ್ಟಿ ಹಾಕಬೇಕು ಹಾಗೂ ಹೆಚ್ಚಿನ ದರಕ್ಕೆ ಗೊಬ್ಬರಗಳನ್ನು ಮಾರಾಟ ಮಾಡಿದರೆ ಅಂತಹ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ, ರೈತರಿಂದ ಬರುವ ಅರ್ಜಿಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಸೂಚನೆ ನೀಡಿದರು.