ಚಿಕ್ಕಬಳ್ಳಾಪುರ :18 ತಿಂಗಳಿನ ನಂತರ ಮಕ್ಕಳಿಗೆ ಇಂದಿನಿಂದ ತರಗತಿಗಳು ಪ್ರಾರಂಭವಾಗುತ್ತಿವೆ. ವಿದ್ಯಾರ್ಥಿಗಳಿಗೆ ಆರೋಗ್ಯ ಸಚಿವ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಚಾಕೊಲೇಟ್ ಹಾಗೂ ಗುಲಾಬಿ ಹೂ ಕೊಟ್ಟು ತರಗತಿಗಳಿಗೆ ಬರಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಚಿವರು, ವಿದ್ಯಾರ್ಥಿಗಳಿಗೆ ಕೊರೊನಾ ಬಗ್ಗೆ ಆತ್ಮಸ್ಥೈರ್ಯ ತುಂಬಿದರು. ಕೋವಿಡ್ ಬಂದ ನಂತರ ಶಾಲೆಗಳ ಆರಂಭ ಆಗಿರಲಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ಮಂಕಾಗಿತ್ತು. ವಿದ್ಯಾರ್ಥಿಗಳ ಆರೋಗ್ಯದ ಜೊತೆಗೆ ಶೈಕ್ಷಣಿಕ ಬದುಕು ರೂಪಿಸೋದು ಸರ್ಕಾರದ ಜವಾಬ್ದಾರಿ ಎಂದರು.
ಕೊರೊನಾ ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ಶಾಲೆಗಳು ಆರಂಭವಾಗುತ್ತಿವೆ. ಪ್ರಾರಂಭದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ಕೊಟ್ಟಿದ್ದೆವು. ತದ ನಂತರ ಉನ್ನತ ಶಿಕ್ಷಣಕ್ಕೆ ಅವಕಾಶ ಕೊಟ್ಟಿದ್ದೀವಿ. ಈಗ 9 ರಿಂದ 12ರವರೆಗಿನ ಶಾಲಾ-ಕಾಲೇಜುಗಳ ಆರಂಭ ಮಾಡಲಾಗುತ್ತಿದೆ. ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬಿ ನೈತಿಕ ಸ್ಥೈರ್ಯ ತುಂಬಲು ಶಾಲೆಗಳಿಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದರು.
ಒಂದು ಕೊಠಡಿಯಲ್ಲಿ 20 ಮಕ್ಕಳು ಕೂರಲಿದ್ದಾರೆ. ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಸಹ ನೀಡಲಾಗಿದೆ. ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿಗಳ ಪಾಲನೆ ಮಾಡಬೇಕಾಗಿದೆ. ಇನ್ನ, ಸಿಬ್ಬಂದಿ, ಶಿಕ್ಷಕರಲ್ಲಿ ಕೋವಿಡ್ ಗುಣಲಕ್ಷಣಗಳು ಕಂಡು ಬಂದರೆ ತಕ್ಷಣ ಪರೀಕ್ಷೆ ಮಾಡಬೇಕಾಗಿದೆ ಎಂದು ಹೇಳಿದರು.