ಚಿಕ್ಕಬಳ್ಳಾಪುರ:ಇವತ್ತಿನ ಜಾಗತೀಕರಣ ಯುಗದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ, ಶಿಕ್ಷಣ ಬಹಳ ಮುಖ್ಯವಾಗಿದ್ದು, ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯನ್ನು ಇದೇ ತಳಹದಿಯ ಮೇಲೆ ರೂಪಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೌಶಲ್ಯ ಮಿಷನ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ಮಿನಿ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಮಿನಿ ಉದ್ಯೋಗ ಮೇಳದಿಂದ ಯುವಕರಲ್ಲಿ ಹೊಸ ಆಶಾಭಾವನೆ :
ಕೋವಿಡ್ ಸಾಂಕ್ರಾಮಿಕ ರೋಗ ಬಂದ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಬಹುಪಾಲು ಕ್ಷೇತ್ರದ ಜನರು ಸೇರಿ ನಾವೆಲ್ಲರೂ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದೇವೆ. ಈ ಸಾಂಕ್ರಾಮಿಕ ರೋಗಕ್ಕೆ ಎಷ್ಟೋ ಜನ ಸಾವು-ನೋವುಗಳು ಆಗಿವೆ. ಇದರಿಂದ ಜೀವನೋಪಾಯವೇ ಕಳೆದುಹೋಗಿದೆ ಎಂಬ ಭಯ ಇದುವರೆಗೂ ಹೋಗಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲಾಡಳಿತ ಆಯೋಜಿಸಿರುವ ಮಿನಿ ಉದ್ಯೋಗ ಮೇಳವು ಯುವಕರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಅಲ್ಲದೆ ಎಲ್ಲಾ ಆತಂಕಗಳನ್ನು ದೂರ ಮಾಡಿದೆ. ಮೇಳ ಆಯೋಜಿಸಿದ ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳಿಗೆ ವಿಶೇಷ ಅಭಿನಂದನೆ ತಿಳಿಸಿದರು.
ತಾಂತ್ರಿಕ ಯುಗದಲ್ಲಿ ಉದ್ಯೋಗಾಧಾರಿತ ಶಿಕ್ಷಣ ಅಗತ್ಯ:
ಪ್ರಸ್ತುತ ತಾಂತ್ರಿಕ ಯುಗದಲ್ಲಿ ಉದ್ಯೋಗಾಧಾರಿತ ಶಿಕ್ಷಣ ಅಗತ್ಯ. ಆದರೆ ನಮ್ಮ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯ ಕೊರತೆ ಇದೆ. ಇವತ್ತಿನ ದಿನಗಳಲ್ಲಿ ವಿದ್ಯೆಯಲ್ಲಿ ಕೌಶಲ್ಯ ಇರಬೇಕು ಎಂಬ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡಿದೆ. ವಿದ್ಯಾರ್ಥಿಗಳು ಬೇಡಿಕೆಗೆ ಅನುಗುಣವಾಗಿ ಶಿಕ್ಷಣ ಪಡೆದು ಉದ್ಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.