ಚಿಕ್ಕಬಳ್ಳಾಪುರ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆ ಸಂಬಂಧ ರೈತ ಮುಖಂಡರ ಜೊತೆ ಸರ್ಕಾರವು ಮಾತನಾಡಿ, ಮನವೊಲಿಸಲು ಪ್ರಯತ್ನಿಸುತ್ತಿದೆ, ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪರವಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ರೈತ ಸಂಘಟನೆ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಕೃಷಿ ಕಾಯ್ದೆ ತಿದ್ದುಪಡಿ ಉದ್ದೇಶ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದು ಮತ್ತು ದಲ್ಲಾಳಿಗಳ ಹಾವಳಿ ತಪ್ಪಿಸುವುದು ಮಾತ್ರ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ರೈತರ ಹಿತಾಸಕ್ತಿಯೇ ಸರ್ಕಾರದ ಹಿತಾಸಕ್ತಿಯಾಗಿದ್ದು, ದಲ್ಲಾಳಿಗಳಿಂದ ರೈತರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸಿದೆ. ಕಾಯ್ದೆಯನ್ನು ವಿರೋಧಿಸಿದರೆ ದಲ್ಲಾಳಿಗಳಿಗೆ ಮಾನ್ಯತೆ ನೀಡಿದಂತೆ ಆಗುತ್ತದೆ. ಹಾಗಾಗಿ ಕಾಯ್ದೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಸಹಕಾರ ನೀಡಬೇಕು ಎಂದು ರೈತ ಮುಖಂಡರಲ್ಲಿ ಮನವಿ ಮಾಡಿದರು.