ಚಾಮರಾಜನಗರ: ಜನರ ರಕ್ತ ಹೀರಿದವರು ಕಾಂಗ್ರೆಸಿಗರು, ನಾವಲ್ಲ ಎಂದು ಆಡಳಿತ ನಡೆಸುತ್ತಿರುವವರು ರಾಕ್ಷಸರು, ರಕ್ತ ಹೀರುವವರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಎಸ್.ಟಿ.ಸೋಮಶೇಖರ್ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿ ಜನಪರವಾದ ಕಾರ್ಯಕ್ರಮಗಳನ್ನು ತಂದು ಉತ್ತಮ ಆಡಳಿತ ಕೊಟ್ಟಿದ್ದಾರೆ. ಆದರೆ, ವಿರೋಧ ಪಕ್ಷದವರಾದ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಏನಾದರೂ ಹೇಳುವುದೊಂದು ಚಟ, ಏನಾದ್ರೂ ಹೇಳುವುದು, ಆಮೇಲೆ ಸುಮ್ಮನೆ ಕೂರುವುದು ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್ ಪಾದಯಾತ್ರೆ ನಡೆಸಿ ರಾಜಕೀಯ ಮಾಡುತ್ತಿದೆ. ಈಗಾಗಲೇ ಯೋಜನೆ ಅನುಷ್ಠಾನಕ್ಕಾಗಿ ಸಿಎಂ ಎಲ್ಲ ಕ್ರಮ ಕೈಗೊಂಡಿದ್ದು, ತಮಿಳುನಾಡಿನ ಕ್ಯಾತೆಗೆ ಸೂಕ್ತ ಉತ್ತರ ಕೊಟ್ಟಿದ್ದಾರೆ. ಸಿದ್ದರಾಮಯ್ಯ 5 ವರ್ಷ ಆಡಳಿತ ನಡೆಸಿದಾಗ ಏನು ಮಾಡಿದರು. ಬಿಜೆಪಿ ಸರ್ಕಾರ ಏನು ಮಾಡಿದೆ ಸೇರಿದಂತೆ ಎಲ್ಲಾ ಸೂಕ್ಷ್ಮ ವಿಚಾರಗಳ ಸಂಬಂಧ ಶೀಘ್ರವೇ ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದರು.