ಚಿಕ್ಕಬಳ್ಳಾಪುರ: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಅವರದ್ದು ಹೆಬ್ಬೆಟ್ಟಿನ ರಾಜಕೀಯ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್ ಅಶೋಕ್, ಹೆಬ್ಬೆಟ್ಟು ರಾಜಕೀಯ ಮಾಡುವುದು ದೇವೇಗೌಡರ ಕುಟುಂಬ. ನಮ್ಮದು ರಾಷ್ಟ್ರೀಯ ಪಕ್ಷ, ತಂದೆ ಹಾಕಿರುವ ಮರಕ್ಕೆ ನೇಣು ಹಾಕಿಕೊಳ್ಳುವುದು ಜೆಡಿಎಸ್ ಪಾರ್ಟಿ ಎಂದು ತಿರುಗೇಟು ನೀಡಿದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದ ನಿಮಿತ್ತ ಮಂಚೇನಹಳ್ಳಿ ತಾಲೂಕಿನ ಜರಬಂಡಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಕನ್ನಡ ಜನತೆ ಮುಂದೆ ಒಂದು ಹೇಳಿದ್ರೆ, ಹೈಕಮಾಂಡ್ ಮುಂದೆ ಮತ್ತೊಂದು ರೀತಿ ಮಾತನಾಡುತ್ತಾರೆ. ಅವರದ್ದು ಹೆಬ್ಬೆಟ್ಟಿನ ರಾಜಕೀಯ ಎಂದು ಟೀಕಿಸಿದರು.
ನಮ್ಮಲ್ಲಿ ವಾಜಪೇಯಿ, ಅಡ್ವಾಣಿ, ನರೇಂದ್ರ ಮೋದಿ ಇದ್ದಾರೆ. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಪಕ್ಷ ನಮ್ಮದಲ್ಲ. ಬಸವರಾಜ ಬೊಮ್ಮಾಯಿ ನಿನ್ನೆ ಮೊನ್ನೆ ಬಂದವರಲ್ಲ, ಇಂಜಿನಿಯರಿಂಗ್ ಓದಿದ್ದಾರೆ. ಜೆ.ಹೆಚ್ ಪಟೇಲ್, ರಾಮಕೃಷ್ಣ ಹೆಗಡೆ ಬಳಿ ತರಬೇತಿ ಪಡೆದಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಸರಳ ಸ್ವಭಾವದವರಾಗಿದ್ದು, ಬಡವರ ಕೈಗೆ ಸಿಗುವ ವ್ಯಕ್ತಿ ಎಂದು ತಿರುಗೇಟು ನೀಡಿದರು.