ಚಿಕ್ಕಬಳ್ಳಾಪುರ : ವಿರೋಧ ಪಕ್ಷ ಇರೋದೇ ಆಡಳಿತ ಪಕ್ಷದ ಮೇಲೆ ಆರೋಪ ಮಾಡೋಕೆ. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದ ಶಾಸಕ ಪ್ರಿಯಾಂಕ‌್ ಖರ್ಗೆಯವರ ಹೇಳಿಕೆಗೆ ಸಚಿವ ಎಂಟಿಬಿ ನಾಗರಾಜ್ ಟಾಂಗ್ ಕೊಟ್ಟಿದ್ದಾರೆ.
ಜಿಲ್ಲೆಯಲ್ಲಿ ಕೊವೀಡ್ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರಧನ ವಿತರಣಾ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ವಿರೋಧ ಪಕ್ಷ ಇರೋದೆ ಆಡಳಿತ ಪಕ್ಷದ ಮೇಲೆ ಆರೋಪ ಮಾಡೋಕೆ. ಕಾನೂನು ಎಲ್ಲರಿಗೂ ಒಂದೇ. ಜಾತಿಗೊಂದು ಕಾನೂನು ಇಲ್ಲ, ಇದು ಜಾತ್ಯಾತೀತ ದೇಶ.
ಸಚಿವ ಎಂಟಿಬಿ ನಾಗರಾಜ್ ಅವರು ನೆಲದ ಕಾನೂನು ಎಲ್ಲರೂ ಪಾಲಿಸಲೇಬೇಕು ಅಂತಾ ಹೇಳಿರುವುದು.. ರಾಜ-ಮಹಾರಾಜ ಕಾಲದಿಂದಲೂ ಕಾನೂನಿನಡಿಯಲ್ಲೇ ಇದ್ದೇವೆ. ನೆಲದ ಕಾನೂನು ಎಲ್ಲರಿಗೂ ಒಂದೇ. ಹಿಜಾಬ್ ವಿವಾದ ಕಾನೂನು ಸಂಘರ್ಷವಾಗಿ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ನ್ಯಾಯಾಲಯ ನೀಡುವ ತೀರ್ಮಾನಕ್ಕೆ ನಾವೆಲ್ಲ ಬದ್ದರಾಗಿರಬೇಕು ಎಂದರು.
ಕೋರ್ಟ್ ತೀರ್ಪು ಬರೋವರೆಗೂ ಚಿಕ್ಕಬಳ್ಳಾಪುರದಲ್ಲಿ ಕಟ್ಟೆಚ್ಚರವಹಿಸಲಾಗುತ್ತಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮವಹಿಸಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬಾರದೆಂದು ಪೊಲೀಸ್ ಇಲಾಖೆಗೆ ಸೂಚಿಸಿದ್ದೇವೆ ಎಂದರು.
ಶಾಸಕರ ಬೇಡಿಕೆಗೆ ಸ್ಪಂದಿಸಿದ ಸಚಿವರು :ಇದೇ ವೇಳೆ ಚಿಂತಾಮಣಿ ಕ್ಷೇತ್ರದಲ್ಲಿ ಕೈಗಾರಿಕಾಭಿವೃದ್ದಿ ಪ್ರದೇಶ ಹಾಗೂ ರಸ್ತೆಗಳ ಹೆಚ್ಚಿನ ಅಭಿವೃದ್ಧಿಗೆ ಅನುದಾನ ನೀಡುವಂತೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರು ಸಚಿವ ಎಂಟಿಬಿ ನಾಗರಾಜ್ ಅವರಲ್ಲಿ ಮನವಿ ಮಾಡಿದರು.
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಹಾಗೂ ಮಳೆ ಹಾನಿ ಪರಿಹಾರವಾಗಿ ಫಲಾನುಭವಿಗಳಿಗೆ ಒಂದು ಲಕ್ಷ ನೀಡುತ್ತಿರುವುದಕ್ಕೆ ಸರ್ಕಾರಕ್ಕೆ ಶಾಸಕರು ಕೃತಜ್ಞತೆ ಸಲ್ಲಿಸಿದರು. ಆದರೆ, ಮಳೆಹಾನಿ ಪರಿಹಾರ ನೀಡಲು ಫಲಾನುಭವಿಗಳನ್ನು ಆತುರಾತುರವಾಗಿ ಆಯ್ಕೆ ಮಾಡಿದ್ದು, ಮತ್ತೊಮ್ಮೆ ಫಲಾನುಭವಿಗಳ ಆಯ್ಕೆಗೆ ಅವಕಾಶ ನೀಡಬೇಕೆಂದು ಕೋರಿದರು.
ಶಾಸಕರ ಮನವಿಗೆ ಸ್ಪಂದಿಸಿದ ಉಸ್ತುವಾರಿ ಸಚಿವರು, ಕೋವಿಡ್ ಹಾಗೂ ಮಳೆ ಪರಿಹಾರದಿಂದ ಕೈತಪ್ಪಿರುವ ಫಲಾನುಭವಿಗಳನ್ನು ಮರು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೋವಿಡ್ ಕಾರಣದಿಂದಾಗಿ ತೆರಿಗೆ ಆದಾಯದಲ್ಲಿ ಕಡಿತವಾಗಿದ್ದು, ಮುಂದಿನ ಬಜೆಟ್ನಲ್ಲಿ ಕಾಮಗಾರಿಗಳಿಗೆ ಅಗತ್ಯ ಅನುದಾನ ನೀಡುವುದಾಗಿ ತಿಳಿಸಿದರು.