ಚಿಕ್ಕಬಳ್ಳಾಪುರ :ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಇಬ್ಭಾಗದ ಗುದ್ದಾಟ ಮುಂದುವರೆದಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳುಹಿಸುವವರೆಗೂ ನಾನು ವಿರಮಿಸುವುದಿಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ನಗರದಲ್ಲಿ ಶಪಥ ಮಾಡಿದ್ದಾರೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ ವಿರುದ್ಧ ಸಚಿವ ಡಾ. ಕೆ. ಸುಧಾಕರ್ ಶಪಥ ನಗರದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಕ್ರಮಗಳ ಕುರಿತು ಮಾತನಾಡಿದ ಅವರು, ವಾಲ್ಮೀಕಿ ಮಹರ್ಷಿ ಅವರು ರಾಮಾಯಣ ಬರೆದರೆ, ಕೋಲಾರ ಡಿಸಿಸಿ ಬ್ಯಾಂಕ್ ಅಕ್ರಮಗಳ ಕುರಿತು ಮಹಾಭಾರತ ಬರೆಯಬಹುದು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದ್ದಾರೆ.
ರಮೇಶ್ ಕುಮಾರ್ ಒಬ್ಬ ರಿಂಗ್ ಮಾಸ್ಟರ್, ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದೇಗೌಡರು ನಟರಷ್ಟೇ, ಅದಕ್ಕೆ ನಿರ್ದೇಶಕರು, ನಿರ್ಮಾಪಕರು ಮಾಜಿ ಸ್ಪೀಕರ್ ಎಂದು ನೇರವಾಗಿಯೇ ಗುಡುಗಿದ್ದಾರೆ.
ಕಾರ್ಯಕ್ರಮದ ಉದ್ದಕ್ಕೂ ರಮೇಶ್ ಕುಮಾರರನ್ನೇ ಟಾರ್ಗೆಟ್ ಮಾಡಿದ ಸಚಿವ ಸುಧಾಕರ್, ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡರು ಬುದ್ಧಿವಂತರೇ.. ಆದರೆ, ರಮೇಶ್ ಕುಮಾರ್‌ರಿಂದ ಮಕ್ಮಲ್ ಟೋಪಿ ಹಾಕಿಸಿಕೊಳ್ತಿದ್ದಾರೆ. ಶ್ರೀನಿವಾಸಗೌಡರು ಕಾಂಗ್ರೆಸ್ನಿಂದ ಜೆಡಿಎಸ್ಗೆ, ಈಗ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋಗೋಕೆ ರಮೇಶ್ ಕುಮಾರ್ ಅವರೇ ಕಾರಣ ಎಂದು ತಿಳಿಸಿದ್ದಾರೆ.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರಮೇಶ್ ಕುಮಾರ್ ಹಿಡಿತ ಸಾಧಿಸಲು ಹೊರಟಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್, ಶ್ರೀನಿವಾಸಪುರಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ ಸಾವಿರಾರು ಕೋಟಿ ಸಾಲ ಕೊಡ್ತಾರೆ. ಚಿಕ್ಕಬಳ್ಳಾಪುರ ಜಿಲ್ಲೆಯವರು ಏನ್ ಮಾಡಿದ್ರು, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಲ್ಲಿ ಹೋಯಿತು.
ಡಿಸಿಸಿ ಬ್ಯಾಂಕ್ ಅಕ್ರಮ ತನಿಖೆ ಬೇಡ ಅಂತಾ ಕೋರ್ಟ್‌ಗೆ ಹೋಗಿದ್ದಾರೆ. ಇವರು ಸಾಚಾ ಆಗಿದ್ರೆ ತನಿಖೆಗೆ ಒತ್ತಾಯ ಮಾಡಬೇಕು. ಸತ್ಯ ಆಚೆ ಬಂದ್ರೆ ನೀವು ಜೈಲಿಗೆ ಹೋಗ್ತೀರಿ. ಸುಧಾಕರ್ ಇರೋವರೆಗೂ ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರ ತೆಗೆಯದೇ ವಿರಮಿಸುವುದಿಲ್ಲಾ ಎಂದು ಶಪಥ ಮಾಡಿದರು.
ಡಿಸಿಸಿ ಬ್ಯಾಂಕ್‌ನಲ್ಲಿ ಅಡಿಯಿಂದ ಮುಡಿಯವರೆಗೂ ಭ್ರಷ್ಟರಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ತನಿಖೆಗೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಸೋಮಶೇಖರ್ ಮುಂದಾಗಿದ್ದಾರೆ. ಇದೇ ವೇಳೆ ನನ್ನ ವಿರುದ್ಧ ಜನರನ್ನ ಎತ್ತಿ ಕಟ್ಟುವ ಕೆಲಸವನ್ನ ಕೆಲವರು ಮಾಡ್ತಿದ್ದಾರೆ. ಆದರೆ, ಇದು ಫಲ ಕೊಡಲ್ಲ.
ಇನ್ನು 64 ಹಳ್ಳಿಗಳ ಜನರಿಗೆ ದಂಡಿಗಾನಹಳ್ಳಿ ಕೆರೆಯ ನೀರೊದಗಿಸಲು ಸಿದ್ಧವಾಗಿದೆ. ಅಭಿವೃದ್ಧಿ ವಿಚಾರಗಳಲ್ಲಿ ರಾಜಕೀಯ ಬೆರೆಸಬಾರದು. ಗೌರಿಬಿದನೂರು ಕಾಂಗ್ರೆಸ್ ಶಾಸಕ ಶಿವಶಂಕರರೆಡ್ಡಿ ವಿರುದ್ಧ ಶಕುನಿ ಎಂದು ವಾಗ್ದಾಳಿ ನಡೆಸಿದರು. ರಮೇಶ್‌ಕುಮಾರ್, ಶಿವಶಂಕರರೆಡ್ಡಿಯಂತಹ ನೂರು ಜನ ಬಂದ್ರೂ ಡಿಸಿಸಿ ಬ್ಯಾಂಕ್, ಕೋಚಿಮುಲ್ ಇಬ್ಭಾಗ ಆಗೇ ಆಗುತ್ತೆ ಅಂತಾ ಸವಾಲ್ ಹಾಕಿದರು.