ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಜಿಲೆಟಿನ್ ಸ್ಫೋಟ ಪ್ರಕರಣ ಸಂಬಂಧ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದು, ತಪ್ಪಿತಸ್ಥರು ಯಾರೇ ಆಗಿದ್ದರೂ ಕಠಿಣ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ.
ಈ ಕ್ವಾರಿಯನ್ನು ಫೆ. 7 ರಂದು ಮುಚ್ಚಿಸಲಾಗಿತ್ತು. ಅಂದಿನಿಂದ ಕ್ವಾರಿ ಚಾಲನೆಯಲ್ಲಿರಲಿಲ್ಲ. ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಆದರೆ 'ಭ್ರಮರವರ್ಷಿಣಿ' ಕ್ವಾರಿ ಮಾಲೀಕರು ಜಿಲೆಟಿನ್ಗಳನ್ನು ಎಲ್ಲಿಯೋ ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ. ಪೊಲೀಸ್ ಇಲಾಖೆ ಕಳೆದ ಎರಡು ದಿನಗಳಿಂದ ಕ್ವಾರಿ ಬಳಿ ಪರಿಶೀಲನೆ ನಡೆಸಿದ್ದು,ಬಹುಶಃ ಹೆದರಿ ಅಕ್ರಮವಾಗಿ ಸಂಗ್ರಹಿಸಿದ್ದ ಜಿಲೆಟಿನ್ ಅನ್ನು ಗುಡಿಬಂಡೆ ತಾಲೂಕಿನ ಕಾಡು ಪ್ರದೇಶದಲ್ಲಿ ಬಿಸಾಡಲು ಟಾಟಾ ಏಸ್ ಹಾಗೂ ಬೈಕ್ ಮೂಲಕ ಒಟ್ಟು 7 ಜನ ಬಂದಿದ್ರು.
ಬಾಂಬ್ ಸ್ಕ್ವಾಡ್ ಮಾಹಿತಿಯಂತೆ ಸ್ಫೋಟಕಗಳನ್ನು ಕಾಡು ಪ್ರದೇಶದಲ್ಲಿ ಬಿಸಾಡಲು ಬಂದಿದ್ದ ವೇಳೆ ಮೊಬೈಲ್ಫೋನ್ ಆನ್ ಆಗಿ ಸ್ಫೋಟ ಸಂಭವಿಸಿರಬಹುದು. ಇಲ್ಲವಾದ್ರೆ ಸಿಗರೇಟ್ ಸೇದುವ ವೇಳೆ ಸ್ಫೋಟಗೊಂಡಿದೆ ಎಂದು ಬಾಂಬ್ ಸ್ವ್ಕಾಡ್ ಪ್ರಾಥಮಿಕ ವರದಿ ನೀಡಿದ್ದಾರೆ. ಈ ಸ್ಫೋಟದಲ್ಲಿ ಒಟ್ಟು 6 ಜನ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಓರ್ವ ಸ್ಥಳೀಯ, ಮತ್ತೋರ್ವ ಬಾಗೇಪಲ್ಲಿ ಮೂಲದವರು, ಮೂವರು ಆಂಧ್ರ ಮೂಲದವರು, ಇನ್ನೋರ್ವ ನೇಪಾಳ ಮೂಲದವ ಎಂದು ತಿಳಿದು ಬಂದಿದೆ ಎಂದು ಸಚಿವರು ಮಾಹಿತಿ ನೀಡಿದರು.
ಯಾರು ಅಕ್ರಮವಾಗಿ ಸ್ಫೋಟಕಗಳನ್ನು ಸರಬರಾಜು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಆದರೆ ಜೀವ ಉಳಿಸಲು ಸಾಧ್ಯವಾಗುವುದಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಕ್ವಾರಿ ಸ್ಫೋಟ ಪ್ರಕರಣದ ನಂತರ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು. ಅದರ ಭಾಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಮಾಡಲಾಗಿತ್ತು. ಇದಕ್ಕೆ ಹೆದರಿ ಈ ರೀತಿ ಸ್ಫೋಟಗಳನ್ನು ಸಾಗಿಸಲು ಹೋಗಿ ಈ ದುರಂತ ನಡೆದಿದೆ. ಮಾಲೀಕರೇ ಈ ಪ್ರಕರಣದ ಮೊದಲ ಆರೋಪಿಗಳು, ಅವರ ಮೂಲಕವೇ ಸ್ಫೋಟಕಗಳು ಬಂದಿರುತ್ತವೆ. ಇಂದು ಬಲಿಯಾದವರು ನತದೃಷ್ಟರು ಎಂದು ಸಚಿವ ಸುಧಾಕರ್ ವಿಷಾದ ವ್ಯಕ್ತಪಡಿಸಿದ್ರು.